Bengaluru CityDistrictsKarnatakaLatestMain Post

ಸಂಪುಟ ವಿಸ್ತರಣೆಗಿಂತ ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡ ಸಿಎಂ

ಬೆಂಗಳೂರು: ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಭರ್ಜರಿ ಜಯ ಗಳಿಸಿದ ಬಳಿಕ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮೂರೂವರೆ ವರ್ಷ ಸಿಎಂ ಸ್ಥಾನ ಫಿಕ್ಸ್ ಆಗಿರೋ ಹಿನ್ನೆಲೆಯಲ್ಲಿ ಹೊಸ ಜೋಷ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ಇನ್ನೂ ಪೂರ್ತಿ ಆಗಿಲ್ಲ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು. ಆದರೆ ಬಿಜೆಪಿಯ ಕೇಂದ್ರದ ನಾಯಕರು ಸಿಎಂ ಯಡಿಯೂರಪ್ಪಗೆ ಇನ್ನೂ ಸಂಪುಟ ವಿಸ್ತರಣೆ ಮಾತುಕತೆಗೆ ಸಮಯ ಕೊಟ್ಟಿಲ್ಲ. ಹೀಗಾಗಿ ಇನ್ನೂ ಸ್ವಲ್ಪ ದಿನ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿಯುತ್ತದೆ. ಈ ಮಧ್ಯೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗಿಂತಲೂ ಬಜೆಟ್ ತಯಾರಿಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈ ಅವಧಿಯ ಬಿಜೆಪಿ ಸರ್ಕಾರದ ಮೊದಲ ಬಜೆಟ್ ನ್ನ ಸಿಎಂ ಯಡಿಯೂರಪ್ಪ ಫೆಬ್ರವರಿಯಲ್ಲಿ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈಗಿನಿಂದಲೇ ಬಜೆಟ್ ಸಿದ್ಧತೆ ಪ್ರಾರಂಭ ಮಾಡಿದ್ದಾರಂತೆ. ಬಜೆಟ್ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದಾರೆ ಅಂದ್ರೆ, ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದಂತೆ ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಂತೆ.

ಈ ಬಾರಿಯ ಬಜೆಟ್ ಯಡಿಯೂರಪ್ಪನವರಿಗೆ ದೊಡ್ಡ ಚಾಲೆಂಜ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಉತ್ತರ ಕರ್ನಾಟಕದ ನೆರೆ ಸರ್ಕಾರದ ಬೊಕ್ಕಸಕ್ಕೆ ಕೊಂಚ ಪೆಟ್ಟು ನೀಡಿದೆ. ಅ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಬೇಕು. ಅದರ ಜೊತೆಗೆ ಅನೇಕ ತಾಲೂಕುಗಳು ಬರದಿಂದ ನಲುಗಿವೆ. ಇದಕ್ಕೂ ಅನುದಾನ ಒದಗಿಸಬೇಕು. ಉಳಿದಂತೆ ಬೆಂಗಳೂರು ಅಭಿವೃದ್ಧಿಗೂ ಸಿಎಂ ಹೆಚ್ಚು ಅನುದಾನ ಕೊಡಬೇಕು. ಹೀಗೆ ಅನೇಕ ಇಲಾಖೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಬೇಕು. ಇದೆಲ್ಲವನ್ನು ತೂಗಿಸಿ ಹೊಸ ಯೋಜನೆ ಜಾರಿಗೆ ತರಬೇಕು. ಹೀಗಾಗಿ ಯಡಿಯೂರಪ್ಪಗೆ ಈ ಬಜೆಟ್ ಸಿಕ್ಕಾಪಟ್ಟೆ ಚಾಲೆಂಜ್ ಆಗಿದೆ.

2008ರಲ್ಲಿ ಸಿಎಂ ಆಗಿದ್ದಾಗ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದರು. ರೈತರಿಗಾಗಿ ವಿಶೇಷ ಯೋಜನೆ ತಂದಿದ್ರು. ಈ ನೆರೆ, ಬರ, ಬೆಂಗಳೂರು ಅಭಿವೃದ್ಧಿ, ಜಿಲ್ಲೆಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ ಹೀಗೆ ಎಲ್ಲಾ ವಿಭಾಗಕ್ಕೂ ಸಿಎಂ ಅನುದಾನ ಹೊಂದಿಸಬೇಕಾಗಿದೆ. ಒಟ್ಟಿನಲ್ಲಿ ಸಿಎಂಗೆ ಈ ಬಾರಿಯ ಬಜೆಟ್ ತಲೆನೋವಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

Back to top button