ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸುಮಾರು 15 ವರ್ಷಗಳ ಬಳಿಕ ಮತ್ತೆ ನಿರ್ದೇಶಕರಾಗಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ‘ಡೆಡ್ಲಿ ಕಿಲ್ಲರ್’ ಬಿಡುಗಡೆಗೆ ಸಜ್ಜಾಗಿದೆ. ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡಿತು.
ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಟಿ. ತಂಬ್ರಳ್ಳಿಮಠ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಭ್ರಮ ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ಚಿತ್ರದ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ.
ಚಿತ್ರದ ಟ್ರೈಲರ್ ಅನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದರು. ನಟ ರವಿಚೇತನ್ ಹಾಗೂ ವಿಕ್ಟರಿ ವಾಸು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ರಾಗಿಣಿ ದ್ವಿವೇದಿ, ಜೂನ್ 6, 2026 ರಂದು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ. ನಾನು ಕೂಡ ಹೊಸಬಳಾಗಿ ಚಿತ್ರರಂಗಕ್ಕೆ ಬಂದವಳು. ನನ್ನ ಮೊದಲ ಸಿನಿಮಾಗೆ ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡಿದ್ದರು. ಅಭಯ್ ನನ್ನ ಕಷ್ಟದ ದಿನಗಳಲ್ಲಿ ಕುಟುಂಬದ ಜೊತೆ ನಿಂತಿದ್ದರು. ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಎಂದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್
ನಿರ್ಮಾಪಕ ಪ್ರಶಾಂತ್ ಟಿ. ತಂಬ್ರಳ್ಳಿಮಠ ಮಾತನಾಡಿ, ಅಭಯ್ ನನ್ನ ಸ್ನೇಹಿತ. ಅವರ ಮೂಲಕವೇ ಥ್ರಿಲ್ಲರ್ ಮಂಜು ಪರಿಚಯವಾದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.
ನಾಯಕ ಅಭಯ್‌ವೀರ್ ಮಾತನಾಡಿ, ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿನಯ್ ಈಗ ನಮ್ಮ ಜೊತೆ ಇಲ್ಲ. ಅವರು ಚಿತ್ರದ ಪ್ರತಿಯೊಂದು ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಚಿತ್ರದಲ್ಲಿ ಆರು ವಿಭಿನ್ನ ಆ್ಯಕ್ಷನ್ ದೃಶ್ಯಗಳಿವೆ. ನಾನು ಇಡೀ ಸಿನಿಮಾದಲ್ಲಿ ಒಂದೇ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಥ್ರಿಲ್ಲರ್ ಮಂಜು ನನ್ನ ನಿಜ ಜೀವನದಲ್ಲೂ ಮಾಸ್ಟರ್. ನಮ್ಮ ಕುಟುಂಬದ ಬ್ಯುಸಿನೆಸ್ ಇದ್ದರೂ ಸಿನಿಮಾ ನನ್ನ ಪ್ಯಾಷನ್ಎಂ ದರು.
ನಟಿ ನಿವೀಕ್ಷಾ ಮಾತನಾಡಿ, ಚಿತ್ರದಲ್ಲಿ ನಾಯಕನ ಪತ್ನಿ ಹಾಗೂ ಗೃಹಿಣಿಯ ಪಾತ್ರ ನಿರ್ವಹಿಸಿದ್ದೇನೆ. ನನ್ನ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ಸ್ ಇವೆ ಎಂದು ಹೇಳಿದರು.
ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ಅಭಯ್ ಬಹಳ ವರ್ಷಗಳಿಂದ ಪರಿಚಯ. ಕಥೆಯ ಒಂದು ಸಾಲು ಹೇಳಿದಾಗ ಅವರಿಗೆ ತುಂಬಾ ಇಷ್ಟವಾಯಿತು. ಬಳಿಕ ಅವರೇ ನಿರ್ಮಾಪಕರನ್ನು ಕರೆತಂದರು. ಕಥೆ ವೇಗವಾಗಿ ಸಾಗುತ್ತದೆ. ಅಭಯ್ ಉತ್ತಮ ನಟ. ಮುಂದೆ ದೊಡ್ಡ ಸ್ಟಾರ್ ಆಗುತ್ತಾರೆ ಎಂದು ಹೇಳಿದರು.
ಇನ್ನೂ ಚಿತ್ರದ ಕಥೆಯ ಕುರಿತು ಮಾತನಾಡಿದ ಅವರು, ಆರು ಮಂದಿ ಗ್ಯಾಂಗ್‌ಸ್ಟರ್‌ಗಳು ಕಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ನಾಯಕ ಹೇಗೆ ಟ್ರ್ಯಾಪ್ ಮಾಡಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಒನ್‌ಲೈನ್ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಅದ್ಭುತ ನಿರೂಪಣೆ ಚಿತ್ರದಲ್ಲಿದೆ ಎಂದರು.
ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ದೀಪು ಸಂಕಲನ ಮಾಡಿದ್ದಾರೆ. ಚಿತ್ರದ ಆರು ವಿಶಿಷ್ಟ ಸಾಹಸ ದೃಶ್ಯಗಳಿಗೆ ಥ್ರಿಲ್ಲರ್ ಮಂಜು ಅವರೇ ಸಾಹಸ ಸಂಯೋಜನೆ ಮಾಡಿದ್ದಾರೆ. ಇದನ್ನೂ ಓದಿ: ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ
ಲೋಕೇಂದ್ರ ಸೂರ್ಯ, ಸುನಿಲ್ ಬಾಲ್ಡರ್, ಪುನೀತ್, ಅಭಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ‘ಡೆಡ್ಲಿ ಕಿಲ್ಲರ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
