Connect with us

BELAKU

ಎದ್ದು ನಿಲ್ಲಲೂ ಸಾಧ್ಯವಾಗ್ದಿರೋ 58 ವರ್ಷದ ಮಗಳಿಗೆ ಬೇಕಿದೆ ಆಧಾರ್ ಕಾರ್ಡ್

Published

on

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ಈ ತಾಯಿ-ಮಗಳ ಕಥೆಯೇ ಒಂದು ದುರಂತ. ಕಳೆದ 58 ವರ್ಷಗಳಿಂದಲೂ ಇದೇ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಇವರ ಹೆಸರು ಮಾಲಿನಿ.

ಈಕೆಯ ಆರೈಕೆಯ ಹೊಣೆ 85 ವರ್ಷದ ತಾಯಿ ಚಂಚಲಾಕ್ಷಿ ಅವರದ್ದು. ಬೆಳೆದು ನಿಂತಿರುವ ತನ್ನ 58 ವರ್ಷದ ಮಗಳನ್ನು ಇನ್ನೂ ಚಿಕ್ಕ ಮಗುವಿನಂತೆ ಸಾಕುತ್ತಿದ್ದಾರೆ. ಈ ದುರಂತಕ್ಕೆ ವೈದ್ಯರೋರ್ವರ ನಿರ್ಲಕ್ಷ್ಯವೇ ಕಾರಣ ಅನ್ನೋದು ಅಘಾತಕಾರಿ ವಿಚಾರ.

ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಿದ್ದಾಗ ಫಿಟ್ಸ್ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಮಂಗಳೂರಿನ ವೈದ್ಯರೋರ್ವರ ಬಳಿ ಚಿಕಿತ್ಸೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ವೈದ್ಯರು 6 ತಿಂಗಳ ಮಗುವಿನ ಬೆನ್ನಿನಲ್ಲಿ ನೀರು ಇದೆ ಅಂತಾ ಹೇಳಿ ನೀರನ್ನು ತೆಗೆದಿದ್ದರಂತೆ. ಆ ಬಳಿಕ ಮಗುವಿಗೆ ಇಂದಿನವರೆಗೆ ಅಂದರೆ 58 ವರ್ಷಗಳವರೆಗೂ ಎದ್ದು ನಿಲ್ಲಲು ಸಾಧ್ಯವೇ ಆಗ್ತಿಲ್ಲ. ಹತ್ತಾರು ಆಸ್ಪತ್ರೆಗಳಿಗೆ ಹೋದ್ರೂ ಫಲಿತಾಂಶ ಮಾತ್ರ ಶೂನ್ಯ.

ಮಗಳು ಚಿಕ್ಕವಳಿದ್ದಾಗ ಎತ್ತಿಕೊಂಡೇ ಸಾಕುತ್ತಿದ್ದ ತಾಯಿಗೆ ಈಗ 85 ವರ್ಷ ವಯಸ್ಸು. ಅನಿವಾರ್ಯವಾಗಿ ಮುದ್ದಿನ ಮಗಳನ್ನ ಎಳೆದಾಡುವ ದುಸ್ಥಿತಿ. ಇಂತಹ ಸ್ಥಿತಿಯಲ್ಲಿರುವ ಮಾಲಿನಿಗೆ ಸಂಜೀವಿನಿಯಂತೆ ಅಂಗವಿಕಲ ವೇತನ ಬರುತ್ತಿತ್ತು. ಆದರೆ ಇದೀಗ ಆಧಾರಕಾರ್ಡ್ ಕಡ್ಡಾಯವಾಗಿರೋದ್ರಿಂದ ಅಂಗವಿಕಲ ವೇತನಕ್ಕೂ ಕೊಕ್ಕೆ ಬಿದ್ದಿದೆ. ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನ ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

ಆಧಾರ್ ಕಾರ್ಡ್ ಬೇಕಾದ್ರೆ ಆಧಾರ್ ಕೇಂದ್ರಗಳಿಗೆ ಹೋಗಲೇಬೇಕು. ಆದ್ರೆ ಈ ಪರಿಸ್ಥಿತಿಯಲ್ಲಿರೋ ಈ ತಾಯಿ-ಮಗಳು ಮನೆಯಿಂದ ಆಚೆ ಹೋಗಲು ಸಾಧ್ಯವೇ ಇಲ್ಲ. ಮಾತ್ರವಲ್ಲದೆ ಈಗಾಗಲೇ ಪಡಿತರ ಚೀಟಿಯಿಂದಲೂ ಮಗಳು ಮಾಲಿನಿಯ ಹೆಸರನ್ನು ಅಧಿಕಾರಿಗಳು ಡಿಲೀಟ್ ಮಾಡಿರೋದರಿಂದ ಮುಂದೆ ಮಾಲಿನಿ ಈ ದೇಶದ ಪ್ರಜೆ ಅನ್ನೋದಕ್ಕೆ ಇವರಲ್ಲಿ ಯಾವುದೇ ದಾಖಲೆಗಳೂ ಇಲ್ಲದಂತಾಗಿದೆ.

ಈ ಹಿಂದೆ ಆಧಾರ್ ಕಾರ್ಡ್ ಮಾಡುವವರು ಮನೆಮನೆಗೆ ಬರುತ್ತಿದ್ದರೂ ಆ ಸಂದರ್ಭದಲ್ಲಿ ಈ ತಾಯಿ-ಮಗಳಿಗೆ ಆಧಾರ್ ಕಾರ್ಡ್ ಬಗ್ಗೆ, ಅದರ ಅಗತ್ಯತೆಯ ಬಗ್ಗೆ ತಿಳಿದಿರಲಿಲ್ಲ. ಇದೀಗ ಅಗತ್ಯ ಇದೆ ಎಂದಾಗ ಮನೆಗೆ ಬಂದು ಆಧಾರ್ ಕಾರ್ಡ್ ಮಾಡುವ ವ್ಯವಸ್ಥೆ ಸ್ಥಗಿತಗೊಂಡಿದೆ. ಹೀಗಾಗಿ ಈ ಸ್ಥಿತಿಯಲ್ಲಿರುವ ಈಕೆಯನ್ನು ಜಿಲ್ಲಾಡಳಿತ ವಿಶೇಷ ಪ್ರಕರಣ ಎಂದು ಪರಿಗಣಿಸಿ ಈಕೆಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡುವ ಪ್ರಯತ್ನವನ್ನು ಮಾಡಿಲಿ ಅನ್ನೋದು ಬೆಳಕು ತಂಡದ ಆಶಯ.

https://youtu.be/rmu4sdSrVOQ

Click to comment

Leave a Reply

Your email address will not be published. Required fields are marked *

www.publictv.in