Connect with us

BELAKU

ಪೆಟ್ಟಿಗೆ ಅಂಗಡಿಯಲ್ಲಿ ವಾಸವಿರುವ ಅಜ್ಜಿಗೆ ಬೇಕಿದೆ ಸೂರು

Published

on

ತುಮಕೂರು: ನಿಜಕ್ಕೂ ಈ ಅನಾಥೆ ವೃದ್ಧೆಯದ್ದು ನರಕ ಜೀವನ. ಬೀದಿಬದಿಯ ಮುರುಕಲು ಪೆಟ್ಟಿಗೆ ಅಂಗಡಿಯಲ್ಲಿ ಸಾಗುತಿದೆ ಈ ಅಜ್ಜಿಯ ಬದುಕು. ಮಳೆಬಂದು ನೀರು ನಿಂತರೂ ಅಲ್ಲೆ ಅವರ ವಾಸ. ಕರೆಂಟ್ ಇಲ್ಲ. ಮೇಣದ ಬತ್ತಿಯೇ ಎಲ್ಲಾ. ಅವರಿವರ ಮನೆ ಪಾತ್ರೆ ತೊಳೆದು ಸ್ವಾಭಿಮಾನದ ಜೀವನ ನಡೆಸುತ್ತಾರೆ 60ರ ಈ ಅಜ್ಜಿ. ಇಂತಹ ವೃದ್ಧೆಗೆ ಒಂದು ಸೂರಿನ ಅವಶ್ಯಕತೆ ಇದೆ. ಇಂದಿನ ಬೆಳಕು ಕಾರ್ಯಕ್ರಮದ ಮೂಲಕ ಆಕೆಗೆನೆರವಾಗೋಣ.

ಸುಮಾರು 60 ವರ್ಷದ ವಯಸ್ಸಿನ ಈ ವೃದ್ಧೆಯ ಹೆಸರು ಚಾಂದ್‍ಬಿ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬರಗೂರು ಗ್ರಾಮದವರು. ಬರಗೂರು ಗ್ರಾಮದ ಶಿರಾ ರಸ್ತೆಯಲ್ಲಿನ ಪೆಟ್ಟಿಗೆ ಅಂಗಡಿಯಲ್ಲಿ ಕಳೆದ 20 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ.

ಇರಲು ಒಂದು ಸೂರು ಇಲ್ಲದೆ ಫುಟ್ ಪಾತ್ ನ ಮುರುಕಲು ಪೆಟ್ಟಿಗೆ ಅಂಗಡಿಯೇ ಈ ವೃದ್ಧೆಗೆ ಪ್ರಪಂಚವಾಗಿದೆ. ಮಳೆ ಬಂದರೆ ಅಂಗಡಿ ತುಂಬಾ ನೀರು ನಿಲ್ಲುತ್ತದೆ. ಮಲಗಲು ಕೂಡಾ ಆಗೋದಿಲ್ಲ. ಆದ್ರೂ ವೃದ್ಧೆ ಚಾಂದ್‍ಬಿ ವಿಧಿಯಿಲ್ಲದೆ ನರಕ ಜೀವನ ನಡೆಸಿಕೊಂಡು ಬಂದಿದ್ದಾರೆ.

ರಾತ್ರಿ ಆಯತ್ತು ಅಂದರೆ ವಾಸದ ಜಾಗದಲ್ಲಿ ಬೆಳಕು ಮಾಡೋಣ ಅಂದರೆ ಕರೆಂಟ್ ಸೌಲಭ್ಯ ಕೂಡಾ ಇಲ್ಲ. ಮೇಣದ ಬತ್ತಿಯಿಂದಲೇ ರಾತ್ರಿ ಕಳೆಯಬೇಕಾಗಿದೆ. ಮಳೆ ಬಂದಾಗಲಂತೂ ರಾತ್ರಿಯಿಡಿ ಜಾಗರಣೆಯೇ ಗತಿಯಾಗಿದೆ. ಹಲವು ಬಾರಿ ಹುಳಹುಪ್ಪಡಿ ಕಚ್ಚಿ ಚಾಂದ್‍ಬಿ ಜೀವಕ್ಕೆ ಸಂಚಕಾರ ಬಂದಿತ್ತು. ಈ ಪರಿಸ್ಥಿತಿಯಲ್ಲಿ ವಾಸ ಇರಲು ಒಂದು ಸೂರು ಕಲ್ಪಿಸಿ ಕೊಡುವಂತೆ ಹಲವು ಅಧಿಕಾರಿಗಳ ಬಳಿ ಅಂಗಲಾಚಿದ್ರು ಪ್ರಯೋಜನವಾಗಿಲ್ಲ.

ಚಾಂದ್‍ಬಿ ಅವರದ್ದು ತವರು ಮನೆ ಆಂಧ್ರದ ಮಡಕಶಿರಾ ತಾಲೂಕು. ಕಳೆದ 40 ವರ್ಷದ ಹಿಂದೆ ಶಿರಾದ ಹಸನ್ ಸಾಬ್ ಎನ್ನುವರಿಗೆ ಮದುವೆ ಮಾಡಿಕೊಡಲಾಗಿತ್ತು. ಚಾಂದ್ ಬಿ ಬಾಳಲ್ಲಿ ಬೆಳಕಾಗಿ ಬಂದ ಹಸನ್ ಸಾಬ್ ಕೇವಲ ಮೂರು ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ್ದರು. ಅಲ್ಲಿಂದ ಚಾಂದ್ ಬಿ ಅನಾಥಳಾದ್ದವರು. ಗಂಡನ ಮನೆಯ ಆಸ್ತಿಯೂ ಸಿಗದೇ, ತವರು ಮನೆಯ ನೆರವೂ ದೊರೆಯದೇ ಬೀದಿಗೆ ಬರುವಂತಾಯಿತು. ಅವರಿವರ ಮನೆ ಕೆಲಸ ಮಾಡಿಕೊಂಡು ಸ್ವಾಭಿಮಾನದ ಜೀವನ ನಡೆಸ್ತಾ ಇದ್ದಾರೆ. 60 ವರ್ಷ ವಯಸ್ಸಾದರೂ ಮನೆಕೆಲಸ ಮಾಡಿಯೇ ದುಡಿದು ತಿನ್ನುವ ಛಲ ವೃದ್ಧೆ. ಕೆಲವರು ಹಣಕಾಸಿನ ಸಹಾಯ ಮಾಡಲು ಬಂದರೂ ಇವರು ತೆಗೆದುಕೊಳ್ಳುವುದಿಲ್ಲ. ಇಂತಹ ಸ್ವಾಭಿಮಾನದ ವೃದ್ಧೆಗೆ ಆಸೆ ಏನೆಂದರೆ ತಾನು ವಾಸಿಸಲು ಒಂದು ಸೂರು ಹಾಗೂ ಪಡಿತರ ಚೀಟಿ ಬೇಕು ಅನ್ನೋದು.

ಸೂರು ಒದಗಿಸುವಂತೆ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಅರ್ಜಿ ಹಾಕಿ ಸುಸ್ತಾಗಿದ್ದಾರೆ. ಹೇಗಾದ್ರೂ ಮಾಡಿ ಸೂರು ಒದಗಿಸಿಕೊಟ್ಟು, ಪಡಿತರ ಚೀಟಿ ನೀಡಿದ್ರೆ ಕೂಲಿ ಮಾಡಿಯಾದ್ರೂ ನೆಮ್ಮದಿಯ ಜೀವನ ಸಾಗಿಸ್ತಿನಿ ಎಂದು ವೃದ್ಧೆ ಚಾಂದ್‍ಬಿ ಹೇಳುತ್ತಾರೆ.

Click to comment

Leave a Reply

Your email address will not be published. Required fields are marked *

www.publictv.in