ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದೇ ಜಾತಿಗಣತಿ (Caste Census) ವರದಿ ಸ್ವೀಕರಿಸಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕೊಠಡಿಯಲ್ಲಿ ವರದಿ ಸ್ವೀಕರಿಸಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯ್ಕ್, ಆಯೋಗದ ಸದಸ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಸಿಎಂಗೆ ವರದಿ ಸಲ್ಲಿಸಿದರು. ಇದನ್ನೂ ಓದಿ: ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯ ಪ್ರತಿಯೊಬ್ಬ ಕನ್ನಡಿಗನಿಗೆ ಅರ್ಪಣೆ: ಸಿದ್ದರಾಮಯ್ಯ
ವರದಿಯಲ್ಲಿ ಜನಸಂಖ್ಯೆ ಉಲ್ಲೇಖ
ಮುಸ್ಲಿಂ ಶೇ.14 – 75 ರಿಂದ 80 ಲಕ್ಷ
ವೀರಶೈವ ಲಿಂಗಾಯತ ಶೇ.11- 60 ರಿಂದ 65 ಲಕ್ಷ
ಒಕ್ಕಲಿಗರು ಶೇ.10 – 55 ರಿಂದ 60 ಲಕ್ಷ
ಕುರುಬರು ಶೇ.08 – 40 ರಿಂದ 45 ಲಕ್ಷ
ವರದಿ ಸ್ವೀಕಾರ ವೇಳೆ ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಚಲುರಾಯಸ್ವಾಮಿ, ಶಾಸಕರಾದ ಕೋನರೆಡ್ಡಿ, ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯ್ಕ್, ಸದಸ್ಯರಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ. ಸಿ.ಎಂ.ಕುಂದಗೋಳ, ಡಾ. ಜಿ.ಎನ್.ಶ್ರೀಕಂಠಯ್ಯ ಹಾಗೂ ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ, ಡಿ.ಎನ್.ನಾಯಕ್ ಆಯೋಗದ ವಿಶೇಷ ಸಲಹೆಗಾರರು ಮತ್ತು ಇತರೆ ತಜ್ಞರು ಉಪಸ್ಥಿತರಿದ್ದರು.
ವರದಿ ಸಲ್ಲಿಕೆಗೂ ಮುನ್ನ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ಸರ್ವೇ ಮುಗಿದು 6 ತಿಂಗಳು ಆಗ್ತಾ ಬಂತು. ಸರ್ವೇ ಅನಾಲಿಸಿಸ್ ಮಾಡಿ ರೆಡಿ ಮಾಡ್ತಾ ಇದ್ವಿ. ರೆಡಿಯಾಗಿ ಒಂದು ತಿಂಗಳು ಆಯ್ತು. ಆದರೆ, ಇಂಗ್ಲಿಷ್‌ನಲ್ಲಿತ್ತು. ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಬೇಕಿತ್ತು. ಸಾಮಾನ್ಯ ಜನರಿಗೆ ಅರ್ಥ ಆಗುವ ಹಾಗೇ ತರ್ಜುಮೆ ಮಾಡಿದ್ವಿ. ಹಾಗಾಗಿ, ಸಮಯ ತೆಗೆದು ಕೊಂಡಿದ್ದೇವೆ. ಒಂದು ತಿಂಗಳಿಂದ ರಿಪೋರ್ಟ್ ರೆಡಿ ಇತ್ತು. ಮೆಂಬರ್ಸ್ ಕೆಲವರು ಹೊರಗಡೆ ಇದ್ರು. ಇದೇ ತಿಂಗಳು 29 ಕ್ಕೆ ನಾವು ಮೀಟಿಂಗ್ ಕರೆದಿದ್ದೇವೆ. ಕೆಲವು ಮೆಂಬರ್ಸ್ ಆ ದಿನ ಬರೋಕೆ ಆಗಲ್ಲ ಅಂದ್ರು. ಹಾಗಾಗಿ, ಇವತ್ತೇ ತುರ್ತು ಸಭೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಕಳವಳ ವ್ಯಕ್ತಪಡಿಸಿದೆವು, ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ರು: ಹೆಚ್.ಕೆ.ಪಾಟೀಲ್
ಜಾತಿ ಜನಗಣತಿ ವರದಿ ಸಲ್ಲಿಕೆಗೆ ಸದಸ್ಯರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ತಕ್ಷಣಕ್ಕೆ ಜಾತಿ ಜನಗಣತಿ ಅನುಷ್ಠಾನಕ್ಕೆ ತರೋದಕ್ಕೆ ಕಷ್ಟಸಾಧ್ಯ. ರಿಪೋರ್ಟ್ ಸಿಕ್ಕ ತಕ್ಷಣ ಕ್ಯಾಬಿನೆಟ್ ಹೋಗೋ ಸಾಧ್ಯತೆ ಇದೆ. ಕ್ಯಾಬಿನೆಟ್ ಸ್ವೀಕಾರ ಮಾಡಿದ ಬಳಿಕ ಪ್ರಕ್ರಿಯೆ ನಡೆಯುತ್ತೆ ಎಂದರು.
