ಲಕ್ನೋ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ನಡೆದಿರುವ ಬಹುಕೋಟಿ ಮೌಲ್ಯದ ಕಳ್ಳತನದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅತ್ಯಂತ ಮಹತ್ವದ ಹಾಗೂ ಆಘಾತಕಾರಿ ಸಾಕ್ಷ್ಯಗಳು ಲಭ್ಯವಾಗಿವೆ.
ತನಿಖಾ ಸಂಸ್ಥೆಗಳು ಮುಖ್ಯ ಆರೋಪಿಗಳು ಮತ್ತು ಅವರ ನಿಕಟವರ್ತಿಗಳ ಬ್ಯಾಂಕ್ ಖಾತೆ (Bank Account) ಹಾಗೂ ಆಸ್ತಿಪಾಸ್ತಿಗಳನ್ನು ಪರಿಶೀಲಿಸಿದಾಗ ಶಾಕ್ ಆಗಿದ್ದಾರೆ. ಕಳ್ಳತನ ನಡೆದ ಕೆಲವೇ ದಿನಗಳ ಅವಧಿಯಲ್ಲಿ ಆರೋಪಿಗಳ ವೈಯಕ್ತಿಕ ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಬರೋಬ್ಬರಿ 100 ಪಟ್ಟು ಹೆಚ್ಚಾಗಿದೆ
ಪ್ರಕರಣದ ಡಿಜಿಟಲ್ ಸಾಕ್ಷ್ಯಗಳನ್ನು(Digital Evidence) ನಾಶಪಡಿಸಲು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಬಂಧನಕ್ಕೊಳಗಾಗುವ ಮುನ್ನ ಅಥವಾ ಕಳ್ಳತನದ ತಕ್ಷಣವೇ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿದ್ದ ವಾಟ್ಸಾಪ್ ಚಾಟ್‌ಗಳು, ಕರೆಗಳ ದಾಖಲೆ ಮತ್ತು ಪ್ರಮುಖ ಲೋಕೇಶನ್ ಡೇಟಾವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ. ಸದ್ಯ ಪೊಲೀಸರು ಈ ಡೇಟಾವನ್ನು ಮರಳಿ ಪಡೆಯಲು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವು ಪಡೆದಿದ್ದಾರೆ. ಇದನ್ನೂ ಓದಿ:ದಿನಕ್ಕೆ 2 ಶಿಫ್ಟ್, 40 ಸಿಬ್ಬಂದಿ ಬಳಕೆ – ರಾಮನ ದೇಣಿಗೆ ಲೆಕ್ಕ ಹೇಗೆ ನಡೆಯುತ್ತೆ?

ಅತಿ ಹೆಚ್ಚು ಭದ್ರತೆ ಇರುವ ರಾಮ ಮಂದಿರದ ಗರ್ಭಗುಡಿಯ ವಲಯದಲ್ಲೇ ಈ ಕಳ್ಳತನ ನಡೆದಿರುವುದರಿಂದ, ಕೇವಲ ಹೊರಗಿನವರಿಂದ ಇದು ಸಾಧ್ಯವಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಮಂದಿರದ ಭದ್ರತಾ ಸಿಬ್ಬಂದಿ ಅಥವಾ ಒಳಗಿನ ಕೆಲವರ ಸಂಪೂರ್ಣ ಸಹಕಾರ ಮತ್ತು ಮಾಹಿತಿ ಇಲ್ಲದೆ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸಿಸಿಟಿವಿ ಕ್ಯಾಮೆರಾವಿದ್ದರೂ ಕಳ್ಳತನ – ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ರಹಸ್ಯ ಕ್ಯಾಮೆರಾದಲ್ಲಿ ಬಯಲಾಗಿದ್ದೇಗೆ?
ಮಂದಿರದಿಂದ ಕಳುವಾಗಿದ್ದ ಚಿನ್ನಾಭರಣಗಳು, ಕಾಣಿಕೆ ಹಣ ಹಾಗೂ ಇತರ ಪ್ರಮುಖ ಪ್ರೀಮಿಯಂ ವಸ್ತುಗಳನ್ನು ಆರೋಪಿಗಳು ಎಲ್ಲಿ ಅಡಗಿಸಿಟ್ಟಿದ್ದಾರೆ ಅಥವಾ ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಹೂತುಹೋಗಿರುವ ಕರಾಳ ಸತ್ಯವನ್ನು ಹೊರತರಲು ಸರಣಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ; 42 ದಿನಗಳಲ್ಲಿ 70 ಬಾರಿ ಕಳ್ಳತನ – ತನಿಖೆ ವೇಳೆ ಎಸ್‌ಐಟಿ ಸಿಕ್ತು ಸಾಕ್ಷ್ಯ
ಮಂದಿರದ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಗಂಭೀರ ಪ್ರಶ್ನೆಗಳು ಎದ್ದಿವೆ. ಕಂಟ್ರೋಲ್ ರೂಮ್ ಇನ್‌ಚಾರ್ಜ್ ಮತ್ತು ಭದ್ರತಾ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಮಂದಿರದ ಟ್ರಸ್ಟ್ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ಪ್ರಗತಿಯಲ್ಲಿದೆ. ಮೂಲಗಳ ಪ್ರಕಾರ, ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳಿಗೆ ಇನ್ನೂ ಕ್ಲೀನ್ ಚೀಟ್ ಸಿಕ್ಕಿಲ್ಲ ಮತ್ತು ಅವರ ಪಾತ್ರಗಳ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ.
