ಬೆಂಗಳೂರು: ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಇಕೋಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಹೂಡಿಕೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ಮುಖ್ಯ ಜಾಗತಿಕ ನೀತಿ ಅಧಿಕಾರಿ ರಾಬರ್ಟ್ ಬ್ಲೇರ್ ಹಾಗೂ ಭಾರತದ ನಾಯಕತ್ವ ತಂಡವನ್ನು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಸಂಸ್ಥೆ ಕೈಗೊಳ್ಳಲಿರುವ ಮುಂಬರುವ ಆರ್&ಡಿ ಹೂಡಿಕೆ ಹಾಗೂ ಸೆಮಿಕಂಡಕ್ಟರ್ ಇಕೋಸಿಸ್ಟಂ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಹೂಡಿಕೆಯಿಂದ ಕರ್ನಾಟಕದ ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ಸೃಷ್ಟಿಯಾಗಬಹುದಾದ ಅವಕಾಶಗಳ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಯಿತು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಹೊಂದಿರುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಬಲಿಷ್ಠ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಹೂಡಿಕೆಗಳು ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಕೌಶಲ್ಯ ವೃದ್ಧಿಗೆ ಅಗತ್ಯವಾದ ಪರಿಸರ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸೆಮಿಕಂಡಕ್ಟರ್ ಸಂಬಂಧಿತ ಚಟುವಟಿಕೆಗಳು ವಿಸ್ತರಣೆಯಾಗುವುದರಿಂದ ನೇರ ಹೂಡಿಕೆಗಳ ಜೊತೆಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಆರ್&ಡಿ, ತಂತ್ರಜ್ಞಾನ, ಪೂರೈಕೆ ಸರಪಳಿ ಹಾಗೂ ಸಂಬಂಧಿತ ಕೈಗಾರಿಕೆಗಳ ಬೆಳವಣಿಗೆಗೂ ವೇಗ ಸಿಗಲಿದೆ ಎಂದು ಸಚಿವರು ಹೇಳಿದರು.
ಜಾಗತಿಕ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಕರ್ನಾಟಕವನ್ನು ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ಪಾಲುದಾರರ ಸಹಭಾಗಿತ್ವ ಈ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದರು. ಇದನ್ನೂ ಓದಿ: ಸಿರಿಯಾವನ್ನು ಭಯೋತ್ಪಾದನೆಗೆ ಪ್ರಾಯೋಜನೆ ನೀಡುವ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟ ಅಮೆರಿಕ
ಇದರ ಜೊತೆಗೆ ಬೆಂಗಳೂರಿನಾಚೆಗೂ ಸುಸ್ಥಿರ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ತುಮಕೂರಿನಲ್ಲಿ ಸಂಯೋಜಿತ ‘ಗ್ರೀನ್ ಡೇಟಾ ಸೆಂಟರ್’ ಸ್ಥಾಪಿಸುವ ಪ್ರಸ್ತಾವನೆಯೂ ಇದರ ಭಾಗವಾಗಿದೆ.
ಡಿಜಿಟಲ್ ಮೂಲಸೌಕರ್ಯ, ಸುಸ್ಥಿರ ತಂತ್ರಜ್ಞಾನ ಹಾಗೂ ಉನ್ನತ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಆಕರ್ಷಿಸುವ ಮೂಲಕ ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.ಇದನ್ನೂ ಓದಿ: ಸಂಬಂಧದಲ್ಲಿ ಬಿರುಕು – ಸಿಎಸ್‌ಕೆ ಫ್ರಾಂಚೈಸಿ ಬಿಟ್ಟು ಹೊರಬರ್ತಾರಾ ಧೋನಿ?
