ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ದಿಗ್ಗಜ ಮಹೇಂದ್ರ ಸಿಂಗ್ ಧೋನಿ (MS Dhoni) ಇದೀಗ ಫ್ರಾಂಚೈಸಿ ಬಿಟ್ಟು ಹೊರಬರುವ ಸಾಧ್ಯತೆಗಳಿವೆ ಅನ್ನೋಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವೂ ಇದೆ.
2008 ರಲ್ಲಿ ನಡೆದ ಐಪಿಎಲ್ (IPL 2008) ಉದ್ಘಾಟನಾ ಆವೃತ್ತಿಯಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದಾರೆ. 2007ರ ಟಿ20 ವಿಶ್ವಕಪ್ ಗೆಲುವಿನ ರುವಾರಿಯಾಗಿದ್ದ ಮಹಿ, ಮೊದಲ ಆವೃತ್ತಿಯಲ್ಲೇ 6 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿಗೆ ಬಿಕರಿಯಾಗಿದ್ದರು. ಆಗಿನಿಂದ ಈವರೆಗೆ ಸಿಎಸ್‌ಕೆ ಫ್ರಾಂಚೈಸಿಯಲ್ಲೇ ಇದ್ದಾರೆ, ತಂಡದ ಪರ ಅತಿಹೆಚ್ಚು ರನ್ ಗಳಿಸಿದ ಹಾಗೂ ಅತಿಹೆಚ್ಚು ಪಂದ್ಯಗಳನ್ನಾಡಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಆದರೀಗ ಸಿಎಸ್‌ಕೆ ಹಾಗೂ ಧೋನಿ ಅವರ ನಡುವೆ ಬಿರುಕು ಉಂಟಾಗಿದ್ದು, ಮಹಿ ಫ್ರಾಂಚೈಸಿಯನ್ನೇ ಬಿಟ್ಟುಬರುವ ಸಾಧ್ಯತೆಗಳಿಗೆ ಎಂದು ಹೇಳಲಾಗ್ತಿದೆ.

ತಮ್ಮ ವೃತ್ತಿಜೀವನದ ಅಂತ್ಯದಲ್ಲಿರುವ ಧೋನಿ, ಸಿಎಸ್‌ಕೆ ಫ್ರಾಂಚೈಯ ಪಾಲನ್ನು ಖರೀದಿಸುವ ಮೂಲಕ ಸಿಎಸ್‌ಕೆ ಫ್ರಾಂಚೈಸಿಯೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಬಯಸಿದ್ದರು. ಆದ್ರೆ ಸಿಎಸ್‌ಕೆ ಆಡಳಿತ ಮಂಡಳಿಯು ಅವರ ಷರತ್ತುಗಳಿಗೆ ಒಪ್ಪದ ಹಿನ್ನೆಲೆ ಫ್ರಾಂಚೈಸಿಯ ಷೇರು ಖರೀದಿ ಒಪ್ಪಂದವು ಮುರಿದುಬಿದ್ದಿದೆ. ಹೀಗಾಗಿ ಸಿಎಸ್‌ಕೆ ಫ್ರಾಂಚೈಸಿಗೆ ಗುಡ್‌ಬೈ ಹೇಳುತ್ತಾರಾ ಮಹಿ ಅನ್ನೋದನ್ನ ಕಾದುನೋಡಬೇಕಿದೆ.

ಮೂಲಗಳ ಪ್ರಕಾರ, 45 ವರ್ಷದ ಕ್ರಿಕೆಟಿಗ ಲೆಜೆಂಡ್ ಮಹಿ, ಸಿಎಸ್‌ಕೆಯಲ್ಲಿ ಷೇರು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ ಆಡಳಿತ ಮಂಡಳಿ ಅವರು ಪ್ರಸ್ತಾಪಿಸಿದ ನಿಯಮಗಳಿಗೆ ಮಹಿ ಒಪ್ಪಲಿಲ್ಲ. ಧೋನಿ ಆರಂಭದಲ್ಲಿ ಫ್ರಾಂಚೈಸಿಯ 25% ಪಾಲನ್ನು ಖರೀದಿಸಲು ಬಯಸಿದ್ದರು. ಆದರೆ ಸಿಎಸ್‌ಕೆ ಮಾಲೀಕರು ಅವರಿಗೆ 3% ನೀಡಲು ಒಪ್ಪಿದ್ರು.

ನಂತರ ಧೋನಿ ತಮ್ಮ ಬೇಡಿಕೆಯನ್ನ 20% ಕ್ಕೆ ಇಳಿಸಿದರು, ಆದರೆ ಆಡಳಿತ ಮಂಡಳಿ 4% ಗೆ ಏರಿಸಿತು. ಕೊನೆಗೆ ಮಹಿ 18% ಪಾಲನ್ನು ಖರೀದಿಸಲು ಮುಂದಾದಾಗ CSK 5.5% ಗಷ್ಟೇ ಒಪ್ಪಿಗೆ ನೀಡಿತು. ಹಲವಾರು ಸುತ್ತಿನ ಮಾತುಕತೆಗಳು ನಡೆದ ಹೊರತಾಗಿಯೂ ಯಾವುದೇ ಒಪ್ಪಂದಗಳು ನಡೆಯಲಿಲ್ಲ. ಹೀಗಾಗಿ ಧೋನಿ ಹಾಗೂ ಸಿಎಸ್‌ಕೆ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗ್ತಿದೆ.
2023 ರಲ್ಲಿ ಸಿಎಸ್‌ಕೆ ನಾಯಕತ್ವ ಹೊತ್ತಿದ್ದ ಮಹಿ, ಚೆನ್ನೈಗೆ 5ನೇ ಚಾಂಪಿಯನ್ ಟ್ರೋಫಿ ತಂದುಕೊಟ್ಟಿದ್ದರು. ಆಗ ಮಹಿ ನಿವೃತ್ತಿ ಹೇಳುತ್ತಾರೆ ಎಂದು ಭಾವಿಸಲಾಗಿತ್ತು. 2026ರ ಆವೃತ್ತಿಯಲ್ಲಿ ಧೋನಿ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಹರಾಜಾದರೂ ಒಂದೇ ಒಂದು ಪಂದ್ಯಕ್ಕೂ ಕಣಕ್ಕಿಳಿಯಲಿಲ್ಲ. 2027ರ ಆವೃತ್ತಿಯಲ್ಲಿ ಅವರು ಆಟಕ್ಕೆ ನಿವೃತ್ತಿ ಘೋಷಿಸಿ, ಸಿಎಸ್‌ಕೆ ಮುಖ್ಯಕೋಚ್ ಆಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಷೇರು ಖರೀದಿಯಲ್ಲಿ ಯಾವುದೇ ಒಪ್ಪಂದವಾಗದಿರುವುದು ಸಂಬಂಧವನ್ನು ಹದಗೆಡಿಸಿದೆ. ಹೀಗಾಗಿ ಮತ್ತೆ ಸಿಎಸ್‌ಕೆ ಪರ ಮಹಿ ಆಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

