– ಕಿಟಕಿಯಿಂದ ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ
ಚಿಕ್ಕಬಳ್ಳಾಪುರ: ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44 ರ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ದೊಡ್ಡಪೈಲಗುರ್ಕಿ ಬಳಿ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಕರ್ನೂಲಿನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಬಸ್ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಂಧ್ರಪ್ರದೇಶ (Andhra Pradesh) ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಲಕ್ಷ್ಮಣ್ (52) ಹಾಗೂ ಪ್ರಯಾಣಿಕ ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಉಮಾಕಾಂತ್ ರಾವ್ (77) ಪ್ರಯಾಣಿಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಹುಚ್ಚಾಟ: ಏಕಾಏಕಿ ಹೆಚ್ಚಿದ ನೀರು, ಬೆಂಗಳೂರಿನ ವಿದ್ಯಾರ್ಥಿಗಳ ರಕ್ಷಣೆ

ಹಲವರು ಗಾಯಗೊಂಡಿದ್ದು ಗಾಯಾಳುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೀಟಿನಲ್ಲೇ ಸಿಲುಕಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕ್ರೇನ್ ಸಹಾಯದಿಂದ ಬಸ್ ಮುಂಭಾಗವನ್ನ ಎಳೆದು ಚಾಲಕನ ಮೃತದೇಹವನ್ನ ಹೊರತೆಗೆದರು.
ಪ್ರಯಾಣಿಕನ ಮೃತದೇಹವನ್ನ ಬಸ್‌ನ ಕಿಟಕಿ ಮೂಲಕ ಪೊಲೀಸರು ಹೊರತೆಗೆದ ದೃಶ್ಯ ಮನಕಲಕುವಂತಿತ್ತು. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೇರೆಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೀಡಾಗಿದ್ದ ಬಸ್ ಹಾಗೂ ಲಾರಿಯನ್ನ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಸಿಂಹ – ಬದುಕಿದ್ದೇ ಪವಾಡ
