ಗಾಂಧಿನಗರ: ಅಹಮದಾಬಾದ್‌ನಲ್ಲಿ (Ahmedabad) 260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ AI 171 ಅಪಘಾತದ (Air India Plane Crash) ತನಿಖೆ ಅಂತಿಮ ಹಂತದಲ್ಲಿದೆ. ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Union Civil Aviation Minister Ram Mohan Naidu) ತಿಳಿಸಿದರು.
ಗಾಂಧಿನಗರದ GIFT ಸಿಟಿಯಲ್ಲಿ ನಡೆದ ಎರಡನೇ ಆವೃತ್ತಿಯ ವಿಮಾನ ಗುತ್ತಿಗೆ ಮತ್ತು ಹಣಕಾಸು ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ವಿಮಾನ ಅಪಘಾತದ ತನಿಖೆ ಅಂತಿಮ ಹಂತದಲ್ಲಿದೆ. ಒಂದು ತಿಂಗಳಲ್ಲಿ ಪೂರ್ಣಗೊಳ್ಳಬಹುದು. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ತನಿಖೆಯನ್ನು ನಡೆಸುತ್ತಿದೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರಿಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನೀಡುತ್ತಿದ್ದೇವೆ ಎಂದರು.

ವಿಮಾನದಲ್ಲಿ ವಿದೇಶಿ ಪ್ರಜೆಗಳು ಇದ್ದಿದ್ದರಿಂದ ಅಂತಿಮ ವರದಿಯು ಅಂತರರಾಷ್ಟ್ರೀಯ ಮಟ್ಟದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಆದ್ದರಿಂದ ಈ ವರದಿಯನ್ನು ಪಾರದರ್ಶಕತೆಯಿಂದ ಮಾಡಬೇಕು. ವರದಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದೇವೆ.
ವಿಮಾನಯಾನ ಸಂಸ್ಥೆಯಿಂದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ, ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏರ್ ಇಂಡಿಯಾ ಜೊತೆ ಸಂಪರ್ಕದಲ್ಲಿದೆ. ಸಂತ್ರಸ್ತರ ಕುಟುಂಬಗಳೊಂದಿಗೆ ಮಾತುಕತೆ ನಡೆಸಿ ಸಂಸ್ಥೆ ಪರಿಹಾರ ವಿತರಿಸಬೇಕು. ಬೇರೆ ಸಮಸ್ಯೆಗಳಿದ್ದರೆ, ಸಚಿವಾಲಯವು ವಿಮಾನಯಾನ ಸಂಸ್ಥೆಯ ಜೊತೆ ಮಾತುಕತೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
2025ರ ಜೂನ್ 12ರಂದು, ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 23 ರಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಒಂದು ನಿಮಿಷಕ್ಕೂ ಮೊದಲೇ ಅಹಮದಾಬಾದ್‌ನ ಜನನಿಬಿಡ ಪ್ರದೇಶದಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ 260 ಮಂದಿ ಸಾವನ್ನಪ್ಪಿ, ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದ. ಈ ಅಪಘಾತದ ಪ್ರಾಥಮಿಕ ತನಿಖೆ ನಡೆಸಿದ್ದ AAIB 2025ರ ಜುಲೈ 12 ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.

