– ಒಪ್ಪಿದ್ರೆ ಪಳನಿಸ್ವಾಮಿ – ಉದಯನಿಧಿ ಸ್ಟಾಲಿನ್ ಸರ್ಕಾರ
– ʻಶತ್ರುವಿನ ಶತ್ರು ನನಗೆ ಮಿತ್ರʼ ಫಾರ್ಮುಲಾ
ಚೆನ್ನೈ: ತಮಿಳುನಾಡು (Tamil Nadu) ರಾಜಕೀಯದಲ್ಲೊಂದು ಹೊಸ ಕ್ರಾಂತಿಯಾಗುತ್ತಿದೆ. ಸಾಂಪ್ರಾದಾಯಿಕ ಎದುರಾಳಿಯಂತೆ ರಾಜಕೀಯ ಮಾಡಿಕೊಂಡು ಬಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯಾಗುವ ಸಾಧ್ಯತೆ ಕಂಡು ಬರ್ತಿದೆ. ಅತಿದೊಡ್ಡ ಪಕ್ಷದ ಟಿವಿಕೆಯನ್ನ (TVK) ಅಧಿಕಾರದಿಂದ ದೂರವಿಡಲು ಬದ್ಧವೈರಿಗಳು ಒಂದಾಗುತ್ತಿದ್ದಾರೆ. ಅಷ್ಟಕ್ಕೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುವ ಈ ಎರಡು ಪಕ್ಷಗಳ ಮೈತ್ರಿ ಸಾಧ್ಯವಾ? ಅನ್ನೂದು ಕುತೂಹಲ ಮೂಡಿಸಿದೆ.
ಶತ್ರುವಿನ ಶತ್ರು ಮಿತ್ರ ಅನ್ನೊ ಮಾತಿದೆಯಲ್ಲ, ಅದೀಗ ತಮಿಳುನಾಡು ರಾಜಕೀಯಕ್ಕೂ ಅನ್ವಯಿಸುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತ ಇಲ್ಲದೇ ಸರ್ಕಾರ ರಚಿಸಲು ಹರಹಾಸಪಡುತ್ತಿರುವ ಟಿವಿಕೆಯನ್ನ ಅಧಿಕಾರದಿಂದ ದೂರವಿಡಲು ಡಿಎಂಕೆ – ಅಣ್ಣಾಡಿಎಂಕೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ.

ಚುನಾವಣಾ ಫಲಿತಾಂಶದ ಬಳಿಕ ಬಹುಮತ ದೊರೆಯದ ಟಿವಿಕೆ ಸರ್ಕಾರ ರಚನೆಗೆ ಸರ್ಕಸ್ ಮಾಡುತ್ತಿದೆ. ಸರ್ಕಾರ ರಚನೆಗೆ ಬೇಕಾದ ಬಹುಮತ ಹೊಂದಿಸಲು ವಿಜಯ್ ಒದ್ದಾಡುತ್ತಿದ್ದಾರೆ. ಈ ನಡುವೆ ಈ ಬಾರಿಯ ಚುನಾವಣೆ ತೀವ್ರ ಹಿನ್ನಡೆ ಅನುಭವಿಸಿರುವ ಡಿಎಂಕೆ – ಅಣ್ಣಾಡಿಎಂಕೆ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿವೆ ಎನ್ನಲಾಗುತ್ತಿದ್ದು, ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ ಎನ್ನಲಾಗುತ್ತಿದೆ. ಇತ್ತ ಮೈತ್ರಿಗೆ ಸುಳಿವು ಕೊಟ್ಟಿರುವ ಡಿಎಂಕೆ ಬಿಜೆಪಿ ಮೈತ್ರಿ ಬಿಟ್ಟುಬರುವಂತೆ ಅಣ್ಣಾಡಿಎಂಕೆಗೆ ಷರತ್ತು ವಿಧಿಸಿದೆ. ಷರತ್ತು ಒಪ್ಪಿದ್ರೆ ಪಳನಿಸ್ವಾಮಿ – ಉದಯನಿಧಿ ಸ್ಟಾಲಿನ್ ನೇತೃತ್ವದ ಸರ್ಕಾರ ತಮಿಳುನಾಡಿನಲ್ಲಿ ಉದಯವಾಗಲಿದೆ.
ಡಿಎಂಕೆ – ಎಐಎಡಿಎಂಕೆ ಹುಟ್ಟಿದ್ದೇಗೆ?
ತಮಿಳುನಾಡು ರಾಜಕೀಯ ದ್ರಾವಿಡ ಚಳುವಳಿ ಹಿನ್ನಲೆಯಿಂದ ಬಂದಿದೆ. ಪೆರಿಯಾರ್ ಸ್ವಾಮಿ ಅವರ ನೇತೃತ್ವದ ದ್ರಾವಿಡರ್ ಕಳಗಂ ಮೂಲಕ ದ್ರಾವಿಡ ರಾಜಕೀಯ ಚಳುವಳಿ ಆರಂಭವಾಗಿತ್ತು. ಈ ಪಕ್ಷದಿಂದ ಹೊರ ಬಂದು 1949 ರಲ್ಲಿ ಸಿ.ಎನ್ ಅಣ್ಣಾದೊರೈ ಅವರು ಡಿಎಂಕೆ ಪಕ್ಷವನ್ನ ಸ್ಥಾಪಿಸಿದರು. 1967ರಲ್ಲಿ ಅಣ್ಣಾದೊರೈ ನಾಯಕತ್ವದಲ್ಲಿ ಡಿಎಂಕೆ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದು, ಕಾಂಗ್ರೆಸ್ ಆಳ್ವಿಕೆಯನ್ನು ಕೊನೆಗೊಳಿಸಿತು.
ಡಿಎಂಕೆ ನಿಂದ ಬೇರ್ಪಟ್ಟು 1972ರಲ್ಲಿ ಎಂ.ಜಿ ರಾಮಚಂದ್ರನ್ ಎಐಎಡಿಎಂಕೆ ಸ್ಥಾಪಿಸಿದರು. ಎಂಜಿಆರ್ ಅವರು ಜನಪ್ರಿಯ ಚಿತ್ರನಟರಾಗಿದ್ದರು ಮತ್ತು ಡಿಎಂಕೆ ನಲ್ಲಿ ಮುಖ್ಯ ನಾಯಕರಾಗಿದ್ದರು. ಅಣ್ಣಾದೊರೈ ಹೆಸರನ್ನೂ AIADMK ಎಂದು ಕರೆಯಲಾಯಿತು. ಎಂಜಿಆರ್ ಅವರ ಜನಪ್ರಿಯತೆಯಿಂದಾಗಿ ಈ ಪಕ್ಷ ಬೇಗ ಬೆಳೆಯಿತು.

ಒಂದಾಗಲಿವೆಯಾ ಸೈದ್ದಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷಗಳು?
ಡಿಎಂಕೆ ಸಿದ್ಧಾಂತ
* ಡ್ರಾವಿಡ ರಾಷ್ಟ್ರೀಯತೆ, ಬ್ರಾಹ್ಮಣ ವಿರೋಧ, ಧರ್ಮನಿರಪೇಕ್ಷತೆ, ದ್ರಾವಿಡ ಸಂಸ್ಕೃತಿಯ ಪುನರುಜ್ಜೀವನ
ಆದರ್ಶವಾದಿ ಮತ್ತು ವ್ಯವಸ್ಥಿತ ರಾಜಕೀಯ.
* ಹೆಚ್ಚು ಹಿಂದಿ ವಿರೋಧಿ, ರಾಜ್ಯ ಸ್ವಾಯತ್ತತೆಗೆ ಹೆಚ್ಚು ಒತ್ತು
* ಸಾಮಾಜಿಕ ಸುಧಾರಣೆಗಳ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ
ಎಐಎಡಿಎಂಕೆನ ಸಿದ್ಧಾಂತ
* ಪಾಪ್ಯುಲಿಸ್ಟ್ (ಜನಪ್ರಿಯತೆ ಆಧಾರಿತ) ರಾಜಕೀಯ
* ಉಚಿತ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು
* ಎಂಜಿಆರ್ ಮತ್ತು ಜಯಲಲಿತಾ ಅವರ ಜನಪ್ರಿಯ ನಾಯಕತ್ವ ಮತ್ತು ಅಣ್ಣಾ-ಅಮ್ಮಾ ಚಿತ್ರಣ
* ಡ್ರಾವಿಡ ಸಿದ್ಧಾಂತವನ್ನ ಮೃದುವಾಗಿ ಅನುಸರಣೆ
* ಬಡವರು, ಮಹಿಳೆಯರು, ರೈತರು ಮತ್ತು ಹಿಂದುಳಿದ ವರ್ಗಗಳಿಗೆ ನೇರ ಕಲ್ಯಾಣ ಯೋಜನೆಗಳ ಮೂಲಕ ಸೇವೆ
ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಾಯೋಗಿಕ ಮತ್ತು ಸಮರ್ಪಕ ಧೋರಣೆ
* ಹಿಂದಿ ವಿರೋಧಿ ಕಡಿಮೆ ತೀವ್ರತೆಯದ್ದು
1972ರಲ್ಲಿ ಡಿಎಂಕೆ ನಲ್ಲಿ ಎಂಜಿಆರ್ ಮತ್ತು ಕರುಣಾನಿಧಿ ನಡುವೆ ಭಿನ್ನಾಭಿಪ್ರಾಯ ಬೆಳೆದು ಎಂಜಿಆರ್ ಅವರನ್ನು ಪಕ್ಷದಿಂದ ತೆಗೆದುಹಾಕಿದರು. ಅಲ್ಲಿಂದ ಈ ಪಕ್ಷಗಳಲ್ಲಿ ವೈರತ್ವ ಆರಂಭವಾಯಿತು. ಜಯಲಲಿತಾ ಮತ್ತು ಕರುಣಾನಿಧಿ ನಡುವೆ ವೈಯಕ್ತಿಕ ವೈರತ್ವ ತೀವ್ರವಾಗಿತ್ತು. ಕಳ್ಳತನ, ಭ್ರಷ್ಟಾಚಾರ ಆರೋಪಗಳು, ಭೂಮಿ/ಸಂಪತ್ತು ಪ್ರಕರಣಗಳು ಎರಡು ಪಕ್ಷಗಳ ನಡುವೆ ಸಾಮಾನ್ಯವಾಗಿದ್ದವು. ಎರಡು ಪಕ್ಷಗಳೂ ಪರಸ್ಪರ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದವು. 1980-90ರ ದಶಕಗಳಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿತು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಡಿಎಂಕೆ ಭಾರೀ ಸೋಲು ಕಂಡಿತು. ತಮಿಳುನಾಡು ರಾಜಕೀಯದಲ್ಲಿ DMK-AIADMK ಸಂಬಂಧಿತ ಹಿಂಸೆ, ಕೊಲೆಗಳ ಇತಿಹಾಸವಿದೆ. ಮುಖ್ಯವಾಗಿ 1989 ಮಾರ್ಚ್ 25 ರಂದು ವಿಧಾನಸಭೆಯಲ್ಲಿ ಅಂದು ವಿಪಕ್ಷ ನಾಯಕಿಯಾಗಿದ್ದ ಜಯಲಲಿತಾ ಅವರ ಸೀರೆಯನ್ನು ಡಿಎಂಕೆ ನಾಯಕ ದೊರೆ ಮುರುಗನ್ ಎಳೆದರು ಎನ್ನುವ ಆರೋಪ ಕೇಳಿ ಬಂದಿತು, ಇದು ಗಲಭೆಗೆ ಕಾರಣವಾಗಿತ್ತು. ಜಯಲಲಿತಾ ಕಣ್ಣೀರು ಸುರಿಸುತ್ತಾ ಸೀರೆ ಕಿತ್ತ ಸ್ಥಿತಿಯಲ್ಲಿ ವಿಧಾನಸಭೆಯಿಂದ ಹೊರ ಬಂದರು. ಅಲ್ಲಿಂದ ಎರಡು ಪಕ್ಷಗಳ ನಡುವೆ ವೈಷಮ್ಯ ಇನ್ನಷ್ಟು ಹೆಚ್ಚಾಯಿತು.
ಅಂದಿನಿಂದ ಪರಸ್ಪರ ವಿರುದ್ಧ ರಾಜಕೀಯ ಮಾಡಿಕೊಂಡ ಬಂದ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಈಗ ಟಿವಿಕೆಯನ್ನ ಅಧಿಕಾರದಿಂದ ದೂರ ಇಡಲು ಒಂದಾಗುವ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಸಂಬಂಧ ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿವೆ. ಹೀಗಾಗೀ ಸೈದ್ಧಾಂತಿಕವಾಗಿ ಇಷ್ಟು ದೊಡ್ಡ ಭಿನ್ನಾಭಿಪ್ರಾಯ ಇರುವ ಪಕ್ಷಗಳು ಒಂದಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಆದಾಗ್ಯೂ ರಾಜಕೀಯದಲ್ಲಿ ಯಾವುದೇ ಅಸಾಧ್ಯವಲ್ಲ ಎನ್ನವುದು ನೆನಪಿನಲ್ಲಿಡಬೇಕು.

