ಲಕ್ನೋ: ಉತ್ತರ ಪ್ರದೇಶದ (Uttara Pradesh) ಮಾಜಿ ರಾಜ್ಯ ಸಚಿವ ಹಾಗೂ ಬಿಜೆಪಿ(BJP) ಒಬಿಸಿ ಮೋರ್ಚಾ ನಾಯಕ ನಾನಕ್ ರಾಮ್ ಭೂರ್ಜಿ (55) ಅವರು ಲಖನೌದ ಶಾಸಕರ ನಿವಾಸದ 7ನೇ ಮಹಡಿಯಿಂದ ಬಿದ್ದು ಮಂಗಳವಾರ (ಜುಲೈ 28) ಮೃತಪಟ್ಟಿದ್ದಾರೆ.
ಹಝರತ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದಾರುಲ್ ಸಫಾ ನೂತನ ಶಾಸಕರ ನಿವಾಸದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಶಾಸಕರ ನಿವಾಸದ ಎಸ್ಟೇಟ್ ಅಧಿಕಾರಿಯು ಘಟನೆ ಕುರಿತು ಪೊಲೀಸ್ ಚೌಕಿಗೆ ಮಾಹಿತಿ ನೀಡಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ನಾನಕ್ ರಾಮ್ ಭೂರ್ಜಿ(Nanak Ram Bhurji) ಅವರನ್ನು ತಕ್ಷಣವೇ ಹತ್ತಿರದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಾಯಕರಲ್ಲಿ ಕ್ಷಮೆಯಾಚಿಸಿ ಬಿಗ್ ಬಾಂಬ್ ಸಿಡಿಸಿದ ಜಮೀರ್
ಘಟನೆ ಕುರಿತು ಮೃತರ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಲಾಗಿದ್ದು, ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಭುರ್ಜಿ ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಶಾಸಕರ ನಿವಾಸದ ಆವರಣದಲ್ಲಿ ಆಗಾಗ್ಗೆ ಓಡಾಡುತ್ತಿದ್ದರು ಎಂದು ನಿವಾಸದಲ್ಲಿದ್ದ ಜನರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
