ಬೆಂಗಳೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿ ನಡೆಯುತ್ತಿರುವಂತೆಯೇ ರಾಜಕೀಯ ವಲಯದಲ್ಲಿ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದೆ. ಶಾಸಕ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರು ಕಾಂಗ್ರೆಸ್ ಹೈಕಮಾಂಡ್ (Congress High Command) ಹಾಗೂ ರಾಜ್ಯದ ಪ್ರಮುಖ ನಾಯಕರ ಕ್ಷಮೆಯಾಚಿಸುವ ಮೂಲಕ ತೀವ್ರ ಸಂಚಲನ ಮೂಡಿಸಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಷಡ್ಯಂತ್ರ ಹಾಗೂ ಪಿತೂರಿ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆ ಉಪಚುನಾವಣೆ (Davanagere By Election) ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ ಎಂದು ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸಲು CWRC ಆದೇಶ
ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ತಾನು ಮನವಿ ಮಾಡಿದ್ದು ನಿಜ ಎಂದು ಸ್ವಷ್ಟಪಡಿಸಿದ ಅವರು, ಬಳಿಕ ಅಗಲಿದ ನಾಯಕರ/ಮೃತರ ಕುಟುಂಬಕ್ಕೇ ಟಿಕೆಟ್ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಹಿನ್ನೆಲೆಯನ್ನು ವಿವರಿಸಿದರು.
ತಮ್ಮ ವಿರುದ್ಧ ಗೂಢಚರ್ಯೆ ಅಥವಾ ಮಸಲತ್ತು ನಡೆಸಿದವರ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನ್ನ ವಿರುದ್ಧ ಪಿತೂರಿ ಮಾಡಿದವರಿಗೂ ಒಳ್ಳೆಯದಾಗಲಿ, ಅವರೂ ಚೆನ್ನಾಗಿರಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸಂಪುಟ ವಿಸ್ತರಣೆ ನಡೆಯುವ ನಿರ್ಣಾಯಕ ಹಂತದಲ್ಲೇ ಜಮೀರ್ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
