ನವದೆಹಲಿ: ಜಂತರ್ ಮಂತರ್(Jantar Mantar) ಹಾಗೂ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ(Protest) ಮೇಲೆ ನಡೆದ ಪೊಲೀಸರ ದೌರ್ಜನ್ಯ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಅಪರಾಧ ಹಿನ್ನೆಲೆ ಇಲ್ಲದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಕ್ರಮ ಜರುಗಿಸಬಾರದು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ತಡೆ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಬಂಧನಕ್ಕೊಳಗಾಗಿರುವ 18 ವರ್ಷದೊಳಗಿನ ಅಪ್ರಾಪ್ತರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡವರು ಕಾನೂನನ್ನು ಎದುರಿಸಬೇಕು. ನ್ಯಾಯಯುತ ತನಿಖೆಯು 200 ಹೆಚ್ಚು ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬಗಳ ಕಳವಳಗಳನ್ನು ಸಹ ಪರಿಹರಿಸಬೇಕು ಎಂದು ಹೇಳಿತು
ಯಾವುದೇ ಅಪರಾಧ ಹಿನ್ನೆಲೆ (Criminal Antecedents) ಹೊಂದಿರದ ಸಾಮಾನ್ಯ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು. ಪ್ರತಿಭಟನಾಕಾರರ ವೈಯಕ್ತಿಕ ಮತ್ತು ಡಿಜಿಟಲ್ ಡೇಟಾವನ್ನು ಪೊಲೀಸರು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಸೂಚಿಸಿತು. ಇದನ್ನೂ ಓದಿ: ನೀಟ್ ಪ್ರತಿಭಟನೆಯಲ್ಲಿ 2,873 ಕ್ರಿಮಿನಲ್‌ಗಳು – ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸ್ ವರದಿ

ಪ್ರತಿಭಟನಾ ಸ್ಥಳದ ಎಲ್ಲಾ ಸಿಸಿಟಿವಿ (CCTV) ಡ್ರೋನ್ ಕ್ಯಾಮೆರಾ ದೃಶ್ಯಗಳು, ಬಾಡಿ ಕ್ಯಾಮೆರಾ ರೆಕಾರ್ಡಿಂಗ್ ಹಾಗೂ ಪಿಸಿಆರ್ (PCR) ಸಂವಹನ ದಾಖಲೆಗಳನ್ನು ಸುರಕ್ಷಿತವಾಗಿ ರಕ್ಷಿಸಿಡಬೇಕು. ಘಟನೆಗೆ ಸಂಬಂಧಿಸಿದಂತೆ ತಮ್ಮ ಆಕ್ಷೇಪಣೆ ಸಲ್ಲಿಸಲು ದೆಹಲಿ, ಮಹಾರಾಷ್ಟ್ರ, ಬಿಹಾರ, ಕೇರಳ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸುವ ಸುಳಿವು ನೀಡಿದೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆಗೆ ಡಿಸಿಪಿ ಆದೇಶ – ಪೊಲೀಸ್ ಠಾಣೆಯ ಡೈರಿಯಲ್ಲಿ ದಾಖಲು
ವಿಚಾರಣೆ ಸಮಯದಲ್ಲಿ ಪ್ರತಿಭಟನೆ ಹತೋಟಿಗೆ ತರಲು ಪೊಲೀಸರು ಎಲೆಕ್ಟ್ರಿಕ್ ಬ್ಯಾಟನ್, ಪೆಲೆಟ್ ಗನ್‌ಗಳು, ಮೊಳೆಗಳಿದ್ದ ಲಾಠಿಗಳನ್ನು ಬಳಸಿದ್ದಾರೆ ಹಾಗೂ ಸಾಧಾರಣ ಉಡುಪಿನಲ್ಲಿದ್ದ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಶಾಂತಿಯುತ ಮತ್ತು ಕಾನೂನಾತ್ಮಕ ಪ್ರತಿಭಟನೆ ಮಾಡುವುದು ಸಂವಿಧಾನಬದ್ಧ ಹಕ್ಕು. ವಿದ್ಯಾರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳಿಬ್ಬರಿಗೂ ಗಾಯಗಳಾಗಿರುವ ಆರೋಪಗಳಿದೆ. ಪೊಲೀಸರ ದೌರ್ಜನ್ಯ ಮತ್ತು ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿ ಅಥವಾ ಎಸ್‌ಐಟಿ (SIT) ರಚಿಸುವುದಾಗಿ ನ್ಯಾಯಪೀಠ ಸೂಚಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಕೆಲ ಕಿಡಿಗೇಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರು ನುಸುಳಿ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ನಡೆದಿದ್ದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.
ಈ ವೇಳೆ ಪ್ರತಿಭಟನೆಗಳ ನಿರ್ವಹಣೆ ಕುರಿತ ಹಳೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವಾರ ನಡೆಯಲಿದೆ.
