Saturday, 22nd February 2020

Recent News

ವರುಣ ದೇವನ ಕೃಪೆಗೆ ಚಾಮರಾಜನಗರ ಮಂದಿ ಫುಲ್ ಖುಷ್ – ಚುರುಕುಗೊಂಡ ಕೃಷಿ ಚಟುವಟಿಕೆ

ಚಾಮರಾಜನಗರ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬೆಳೆ, ಬದುಕು, ಆಸ್ತಿಪಾಸ್ತಿ ನಾಶವಾಗಿದ್ದರೆ, ಇತ್ತ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಜನರು ಬರದ ಛಾಯೆಯಿಂದ ಹೊರ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ.

ಉತ್ತರ ಕರ್ನಾಟಕದ ಜನರು ಪ್ರವಾಹದಿಂದ ನಲುಗಿ ಹೋಗಿದ್ದು ಅವರು ಬೆಳೆದಂತಹ ಬೆಳೆ ಸೇರಿದಂತೆ ಆಸ್ತಿಪಾಸ್ತಿ ನಷ್ಟದಿಂದ ದಿಕ್ಕು ತೋಚದಂತಾಗಿದ್ದಾರೆ. ಇತ್ತ ದಕ್ಷಿಣ ಕರ್ನಾಟಕದ ಬರದನಾಡು ಚಾಮರಾಜನಗರದ ಜನರು ಸಖತ್ ಖುಷಿಯಲ್ಲಿದ್ದು, ಕೃಷಿ ಚಟುವಟಿಕೆ ಆರಂಭಿಸಲು ಮುಂದಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಮುಂಗಾರು ಮಳೆಯಿಲ್ಲದೆ ಈ ಬಾರಿಯೂ ವ್ಯವಸಾಯ ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿದ್ದ ರೈತಾಪಿ ವರ್ಗ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದೆ.

ಎರಡು ವರ್ಷದ ಸತತ ಬರಯಿದ್ದ ಕಾರಣ ಜೀವನಕ್ಕೆ ಮುಂದೆ ಏನು ಎಂಬ ಯೋಚನೆಯಲ್ಲಿ ತೊಡಗಿದ್ದ ಚಾಮರಾಜನಗರ, ಕೊಳ್ಳೆಗಾಲ, ಯಳಂದೂರು ತಾಲೂಕಿನ ಜನರು ಇದೀಗ ತಮ್ಮ ಬದುಕು ಕಟ್ಟಿಕೊಳ್ಳಲು ವ್ಯವಸಾಯಕ್ಕೆ ಮುಂದಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೊಡಗು ಭಾಗದಲ್ಲಿ ಸುರಿದ ಮಳೆಗೆ ಕಬಿನಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಗಡಿ ಜಿಲ್ಲೆಯ ರೈತರು ಈಗಾಗಲೇ ಗದ್ದೆಯನ್ನು ಹದಗೊಳಿಸುವ ಕಾಯಕಕ್ಕೆ ಮುಂದಾಗಿದ್ದು, ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿ ಇದ್ದಾರೆ.

ಕಳೆದ ಎರಡು ವರ್ಷಗಳಿಂದ ಉಳುಮೆ ಕಾಣದ ಗದ್ದೆಗಳು ಇದೀಗ ಉಳುಮೆಗೆ ಸಿದ್ಧವಾಗಿದ್ದು, ನಾಲೆಗಳಲ್ಲಿ ನೀರು ಹರಿಯುತ್ತಿದೆ. ಈ ಬಾರಿ ಭತ್ತ, ಕಬ್ಬು, ರಾಗಿ, ಜೋಳ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ರೈತರು ತಮ್ಮ ಎಂದಿನ ಕಾಯಕಕ್ಕೆ ಮುಂದಾಗಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ನೀರು ಸಿಗುವ ಭರವಸೆ ಹೊಂದಿರುವ ರೈತರು ತಮ್ಮ ಎರಡು ವರ್ಷದ ಬರವನ್ನು ಬೆಳೆ ಬೆಳೆಯುವ ಮೂಲಕ ನೀಗಿಸುವ ಕನಸು ಕಂಡಿದ್ದಾರೆ. ಈಗಾಗಲೇ ಗದ್ದೆಗಳನ್ನು ಹದಗೊಳಿಸುವ ಮೂಲಕ ವ್ಯವಸಾಯಕ್ಕೆ ಮುಂದಾಗುತ್ತಿದ್ದು, ಈ ಬಾರಿ ಉತ್ತಮ ಮಳೆಯಾಗುವುದರಿಂದ ನಮಗೆ ಸಂತಸ ಆಗುತ್ತಿದೆ. ಆದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರವಾಹದಿಂದಾಗಿರುವ ತೊಂದರೆ ನಮಗೂ ನೋವು ತಂದಿದೆ ಎಂದು ರೈತರು ಹೇಳಿದ್ದಾರೆ.

Leave a Reply

Your email address will not be published. Required fields are marked *