– ಎನ್‌ಡಿಎಗೆ ಕೇವಲ 6 ಸಂಸದರ ಬೆಂಬಲ ಕೊರತೆ
ನವದೆಹಲಿ: 2 ತಿಂಗಳ ಹಿಂದಷ್ಟೇ ವಿಪಕ್ಷಗಳ ಹಠದಿಂದ ಸೋಲು ಕಂಡಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ (Women’s Reservation Bill) ಹಾಗೂ ಕ್ಷೇತ್ರ ಪುನರ್ವಿಂಗಡಣೆ ಡಿಲಿಮಿಟೇಶನ್ ಮಸೂದೆಗೆ (Delimitation Bill) ಮತ್ತೆ ಪುನರುಜ್ಜೀವ ಬಂದಿದೆ.
ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಉದ್ಧವ್ ಶಿವಸೇನೆ ಬಣ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳು ಬಿಕ್ಕಟ್ಟು ಎರುತ್ತಿದ್ದರೆ, ಇತ್ತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ ತರುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ – 2026 ಅನ್ನೂ ಮಂಡಿಸಲು ಯೋಚಿಸುತ್ತಿದೆ. ಈ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

ಕಳೆದ ಏಪ್ರಿಲ್‌ನಲ್ಲಿ ನಡೆದ ಬಜೆಟ್ ಅಧಿಕವೇಶನದ ವೇಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. ಆದ್ರೆ ಮಸೂದೆ 54 ಮತಗಳ ಕೊರತೆಯಿಂದ ತಿರಸ್ಕೃತಗೊಂಡಿತ್ತು. ಸದ್ಯ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿರುವ ಸಂಸದರು ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ ಮಸೂದೆ ಅಂಗೀಕಾರಕ್ಕೆ ಎನ್‌ಡಿಎ ತಯಾರಿ ನಡೆಸುತ್ತಿದೆ.
ಮಹಾರಾಷ್ಟ್ರದಲ್ಲೂ ಬಿಕ್ಕಟ್ಟು
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಒಟ್ಟು 9 ಸಂಸದರಲ್ಲಿ 6 ಜನ ಸಂಸದರು ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೆಲ್ಲದರ ಲಾಭ ಎನ್‌ಡಿಎ ಪಡೆದುಕೊಂಡು ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ಲೆಕ್ಕಾಚಾರವಿದೆ.
ಈ ಮಸೂದೆ ಅಂಗೀಕಾರವಾಗಲು ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಎಂದರೆ 362 ಸಂಸದರ ಬೆಂಬಲ ಬೇಕಾಗುತ್ತದೆ. ಆದರೆ ಪ್ರಸ್ತುತ 3 ಸ್ಥಾನಗಳು ಖಾಲಿ ಇರುವುದರಿಂದ ಬಹುಮತದ ಸಂಖ್ಯೆ 360 ಕ್ಕೆ ಇಳಿದಿದೆ. ಪ್ರಸ್ತುತ ಎನ್‌ಡಿಎ ಮೈತ್ರಿಕೂಟ ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದ ಬಂಡಾಯ ಸಂಸದರನ್ನು ಒಳಗೊಂಡು ಲೋಕಸಭೆಯಲ್ಲಿ ಒಟ್ಟು 318 ಸಂಸದರನ್ನು ಹೊಂದಿದೆ. ವಿರೋಧ ಪಕ್ಷಗಳ ಬಲ 184 ಆಗಿದ್ದು, ಯಾವುದೇ ಮೈತ್ರಿಕೂಟಕ್ಕೆ ಸೇರದೇ ತಟಸ್ಥವಾಗಿರುವ 38 ಸಂಸದರಿದ್ದಾರೆ. ಹೀಗಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪಾಸ್ ಆಗಲು ಸರ್ಕಾರಕ್ಕೆ ಇನ್ನೂ 42 ಸಂಸದರ ಬೆಂಬಲ ಬೇಕಾಗಿದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಮತ್ತೆ ಡಿಲಿಮಿಟೇಷನ್ ಬಿಲ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ

ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗುವ ಸಮಯದಲ್ಲಿ ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸಂಸದರ ಸಂಖ್ಯೆಯ ಆಧಾರದ ಮೇಲೆ ಮಸೂದೆಯ ಭವಿಷ್ಯ ನಿರ್ಧಾರವಾಗುತ್ತದೆ. ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಮತದಾನ ನಡೆದಾಗ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 326 ಮತಗಳ ಅಗತ್ಯವಿತ್ತು (ಬಿಲ್‌ಗೆ 3ನೇ 2ರಷ್ಟು ಬಹುಮತ ಬೇಕಿತ್ತು. ಹಾಗಾಗಿ, ಹಾಜರಿದ್ದ 489 ಸದಸ್ಯರ ಪೈಕಿ 326 ಮತ ಬೇಕಿತ್ತು). ಆದ್ರೆ ಲೋಕಸಭೆಯ 543 ಸದಸ್ಯರ ಪೈಕಿ 489 ಸದಸ್ಯರು (54 ಸದಸ್ಯರು ಅನುಪಸ್ಥಿತಿ) ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ರೆ, ವಿರುದ್ಧವಾಗಿ 230 ಸದಸ್ಯರು ಚಲಾಯಿಸಿದ್ರು. ಕೊನೆಗೆ 54 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಗಿತ್ತು.
ಈ 54 ಸಂಸದರಲ್ಲಿ ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನವಾಗಿರುವ 20 ಮಂದಿ ತೃಣಮೂಲ ಬಂಡಾಯ ಸಂಸದರು ಈಗ ಸರ್ಕಾರದ ಪರವಾಗಿದ್ದಾರೆ. ಒಂದು ವೇಳೆ ಶಿವಸೇನೆ ಯುಬಿಟಿಯ 6 ಬಂಡಾಯ ಸಂಸದರು ಜೊತೆಯಾದರೆ ಈ ಸಂಖ್ಯೆ 26ಕ್ಕೆ ಏರುಕೆಯಾಗುತ್ತದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿರುವ ಎಂ. ಕೆ. ಸ್ಟಾಲಿನ್ ಅವರ ಡಿಎಂಕೆ ಪಕ್ಷವು ಕೂಡ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ. ಡಿಎಂಕೆಯ ಬೇಡಿಕೆಗಳನ್ನು ಸ್ವೀಕರಿಸಲು ಸರ್ಕಾರವು ಮಾತುಕತೆ ನಡೆಸುತ್ತಿದೆ ಎಂದು ಪಕ್ಷದ ನಾಯಕರು ಸುಳಿವು ನೀಡಿದ್ದಾರೆ. ಡಿಎಂಕೆಯ 22 ಸಂಸದರ ಬೆಂಬಲದೊಂದಿಗೆ ಸರ್ಕಾರದ ಪರವಾಗಿರುವ ಸಂಸದರ ಸಂಖ್ಯೆ 348 ಕ್ಕೆ ತಲುಪಲಿದ್ದು, ಬಹುಮತಕ್ಕೆ ಕೇವಲ ಆರು ಮತಗಳ ಕೊರತೆಯಷ್ಟೇ ಇರಲಿದೆ.

ಉತ್ತರ ಪ್ರದೇಶದ ಸಚಿವರಾದ ಓಂ ಪ್ರಕಾಶ್ ರಾಜ್‌ಭರ್ ಅವರು ಸಮಾಜವಾದಿ ಪಕ್ಷ ಇಬ್ಭಾಗವಾಗುವ ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ವಿಭಜನೆಯಾಗದಿದ್ದರೂ ಇನ್ನೊಂದು ಆಯ್ಕೆಯಿದೆ. ಬಿಜೆಪಿ ನಾಯಕರು ಇಂಡಿಯಾ ಮೈತ್ರಿಕೂಟದಲ್ಲಿರುವ ಇತರ ಸಣ್ಣ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ರಾಜ್ಯಸಭೆಯಲ್ಲೂ ಡಿಎಂಕೆಯ 8 ಸಂಸದರು ಬೆಂಬಲ ಘೋಷಿಸಿದಿದ್ರೆ ಸಂಖ್ಯೆ 158ಕ್ಕೆ ತಲುಪಲಿದ್ದು, ಬಹುತಮತಕ್ಕೆ 6 ಸಂಸದರ ಅಗತ್ಯವಷ್ಟೇ ಇರಲಿದೆ. ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ನ ಮೂವರು ಸಂಸದರು ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆದ ನಂತರ ಮತ್ತು ಕೆಲವು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಎನ್‌ಡಿಎ ಈ ಮ್ಯಾಜಿಕ್ ನಂಬರ್ ತಲುಪಬಹುದು.
ಸಂಸತ್ತಿನ ಎರಡೂ ಮನೆಗಳಲ್ಲಿ ಈ ಬಹುಮತ ಸಿಕ್ಕರೆ ಮುಂಬರುವ ಮುಂಗಾರು ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಸರ್ಕಾರ ಮತ್ತೆ ಮಂಡಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ʻದೇಶಾದ್ಯಂತ ಒಂದು ದೇಶ, ಒಂದು ಚುನಾವಣೆʼ ಮಸೂದೆ ಕೂಡ ಮಂಡನೆಯಾಗಬಹುದು ಎನ್ನಲಾಗುತ್ತಿದೆ.
