– ಕನಕಪುರ, ಗದಗ ಬರಪೀಡಿತ ಎಂದು ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿದ್ದು ಹಂತ ಹಂತವಾಗಿ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡುತ್ತಿದೆ. ಈಗ ನಾಲ್ಕನೇ ಹಂತದ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಿದ್ದು 188 ತಾಲ್ಲೂಕುಗಳಲ್ಲಿ ಬರ ಎಂಬುದು ಅಧಿಕೃತವಾಗಿದೆ.
ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿದ್ದರಿಂದ ರೈತರು ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಒಣಗಿ ಹೋಗಿವೆ. ರೈತರ ಸಂಕಷ್ಟಕ್ಕೆ ಸ್ಪಂಧಿಸಿದ ರಾಜ್ಯ ಸರ್ಕಾರ ಮೊದಲನೇ ಹಂತದಲ್ಲಿ 101 ತಾಲ್ಲೂಕುಗಳನ್ನು ಎರಡನೇ ಹಂತದಲ್ಲಿ 23 ತಾಲ್ಲೂಕು ಹಾಗೂ ಮೂರನೇ ಹಂತದಲ್ಲಿ 53 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿತ್ತು. ಆದರೆ, ಕೆಲ ತಾಲ್ಲೂಕುಗಳಲ್ಲಿ ಭೀಕರ ಬರ ಇದ್ದರೂ ರಾಜ್ಯ ಸರ್ಕಾರ ಅವುಗಳನ್ನು ಬರಪೀಡಿತ ಎಂದು ಘೋಷಿಸಿರಲಿಲ್ಲ. ಇದು ಸ್ವ ಪಕ್ಷದ ಶಾಸಕರ ಕೆಂಗಣ್ಣಿಗೆ ಕಾರಣವಾಗಿತ್ತು. ಇದೀಗ 11 ತಾಲ್ಲೂಕುಗಳು ಹೆಚ್ಚುವರಿಯಾಗಿ ಗ್ರೌಂಡ್ ಟ್ರೂಥಿಂಗ್‌ಗೆ ಅರ್ಹತೆ ಪಡೆದಿವೆ.
ಇದುವರೆಗೆ ಬೇರೆ ಬೇರೆ ಸಂದರ್ಭದಲ್ಲಿ ಒಟ್ಟು 4 ಹಂತದಲ್ಲಿ ಬರ ಘೋಷಣೆ ಮಾಡಲಾಗಿದೆ. ನಾಲ್ಕು ಹಂತದಲ್ಲಿ ಒಟ್ಟು 188 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದ ಬರ ಪೀಡಿತ ತಾಲ್ಲೂಕುಗಳು 188ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಿನ ತಾಲ್ಲೂಕುಗಳ ಬರ ಘೋಷಣೆಗೆ ಒತ್ತಡ ಹೆಚ್ಚಿದೆ. ಸಿಎಂ ಡಿಕೆಶಿ ಪ್ರತಿನಿಧಿಸುವ ಕನಕಪುರ ಸಹ ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ. ತಮ್ಮ ಜಿಲ್ಲೆಯ ತಾಲ್ಲೂಕು ಬರ ಪಿಡೀತ ಎಂದು ಘೋಷಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಹೆಚ್.ಕೆ.ಪಾಟೀಲ್ ತಾಲ್ಲೂಕು ಗದಗವೂ ಬರಪೀಡಿತ ತಾಲ್ಲೂಕಿನಲ್ಲಿ ಸೇರಿದೆ.
ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲ್ಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿತ್ತು. ಹೆಚ್ಚುವರಿ 11 ತಾಲ್ಲೂಕುಗಳು ಸೇರಿ ಒಟ್ಟು 188 ತಾಲ್ಲೂಕು ಬರ ಪೀಡಿತ ಎಂದು ಘೋಷಣೆ ಆಗಿದೆ.ಇದನ್ನೂ ಓದಿ: ಮಲೆನಾಡ ಪ್ರವಾಸೋದ್ಯಮಕ್ಕೆ ರೆಕ್ಕೆ ಮೂಡಿಸಿದ ಕುವೆಂಪು ವಿಮಾನ ನಿಲ್ದಾಣ
ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ 4ನೇ ಹಂತದಲ್ಲಿ 7 ಜಿಲ್ಲೆಗಳ 11 ತಾಲ್ಲೂಕುಗಳು ಗ್ರೌಂಡ್ ಟ್ರೂಥಿಂಗ್ ಅರ್ಹತೆ ಪಡೆದಿವೆ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲ್ಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್‌ಗೆ ಸೇರಿಸಲಾಗುವುದು. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನಿಯಮಾನುಸಾರ ನೆರವು ತಲುಪಿಸಲು ಸರ್ಕಾರ ಮುಂದಾಗಿದೆ.ಇದನ್ನೂ ಓದಿ: ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಅನಾವರಣ

