ಮಂಗಳೂರು: ಬುದ್ಧಿಮಾತು ಹೇಳಿದ್ದಕ್ಕೆ ಅಣ್ಣನ ಮಗ ತನ್ನ ಚಿಕ್ಕಪ್ಪನನ್ನು ಬಿಯರ್ ಬಾಟಲಿಯಿಂದ ತಿವಿದು ಹತ್ಯೆಗೈದಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ.
37 ವರ್ಷದ ಮಧುಸೂದನ್ ಕೊಲೆಯಾದ ದುರ್ದೈವಿ. ರಾಹುಲ್ ಕೊಲೆಗೈದ ಆರೋಪಿ. ಇದನ್ನೂ ಓದಿ: ಅನಾರೋಗ್ಯದಿಂದ ಬೇಸತ್ತು ಗುಂಡು ಹೊಡೆದುಕೊಂಡು ಆತ್ಮಹತ್ಯೆ – ವೃದ್ಧನ ತಲೆ ಛಿದ್ರ ಛಿದ್ರ
ಮೇ 31ರ ರಾತ್ರಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕೆಲಸದ ವಿಚಾರವಾಗಿ ಮಧುಸೂದನ್ ಅವರು ಆರೋಪಿ ರಾಹುಲ್‌ಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಕಾರ್ಯಕ್ರಮದಿಂದ ಹೊರ ನಡೆದಿದ್ದಾನೆ.
ಕಾರ್ಯಕ್ರಮ ಮುಗಿದ ಬಳಿಕ ಮನೆ ಸಮೀಪ ಮಧುಸೂದನ್ ಮೇಲೆ ರಾಹುಲ್ ಏಕಾಏಕಿ ದಾಳಿ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ಕುತ್ತಿಗೆಗೆ ತಿವಿದ ಪರಿಣಾಮ ಮಧುಸೂದನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಧುಸೂದನ್ ಅವರನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಸಿಟಿವಿಯಿಂದ ಪತ್ನಿ, ಅಪ್ರಾಪ್ತ ಪುತ್ರನ ಕ್ರೌರ್ಯ ಬಯಲು – ಇದಕ್ಕೇನಾ ಶವ ಸುಡಲು ಪಟ್ಟುಹಿಡಿದಿದ್ದು ವೀಣಾ?
ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ರಾಹುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
