– ಚುನಾವಣೆಗೂ ಮುನ್ನವೇ ʻಗ್ಯಾರಂಟಿʼ ಕೊಟ್ಟ ಇಲೋನಾ ಸ್ಟಾಲರ್
ರೋಮ್: ಇಟಲಿಯಲ್ಲಿ ನೀಲಿ ತಾರೆಯಾಗಿ ಖ್ಯಾತಿ ಗಳಿಸಿದ್ದ ಹಾಗೂ ಮಾಜಿ ಸಂಸದೆ ಆಗಿರುವ ಇಲೋನಾ ಸ್ಟಾಲರ್ (Ilona Staller), ಇದೀಗ ರೋಮ್ ನಗರದ ಮೇಯರ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
‘ಸಿಚಿಯೋಲಿನಾ’ (Cicciolina) ಎಂಬ ವೇದಿಕೆಯ ಹೆಸರಿನಿಂದ ಪ್ರಸಿದ್ಧರಾಗಿರುವ 75 ವರ್ಷದ ಇಲೋನಾ ಸ್ಟಾಲರ್, ತಮ್ಮ 75ನೇ ಹುಟ್ಟುಹಬ್ಬದ ದಿನವಾದ ನ.26ರಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಈ ಘೋಷಣೆ ಮಾಡಿದ್ದಾರೆ. 2027ರಲ್ಲಿ ನಡೆಯಲಿರುವ ರೋಮ್ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
1972ರಿಂದ ನಾನು ವಾಸಿಸುತ್ತಿರುವ ರೋಮ್ ನಗರದ ಮೇಯರ್ ಆಗಬೇಕು ಎಂಬ ಆಸೆ ನನಗಿದೆ. ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದೇನೆ. ಆದರೆ ಯಾರ ಜೊತೆಗೂಡಿ ಸ್ಪರ್ಧಿಸುತ್ತೇನೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ರೋಮ್ ನಗರವನ್ನು ಆಧುನಿಕ ಹಾಗೂ ಜನರು ವಾಸಿಸಲು ಹೆಚ್ಚು ಅನುಕೂಲಕರವಾದ ನಗರವನ್ನಾಗಿ ರೂಪಿಸುವುದಾಗಿ ತಿಳಿಸಿದ್ದಾರೆ. ಹಾಲಿ ಮೇಯರ್ ರಾಬರ್ಟೊ ಗುಲ್ಟಿಯೇರಿ ಅವರ ವಿರುದ್ಧ ಸ್ಪರ್ಧಿಸುವ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಯಾವ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಿದ್ದಾರೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ.
ಕಾಡುಹಂದಿಗಳ ರಕ್ಷಣೆಗೆ ವಿಶೇಷ ಒತ್ತು
ಇಲೋನಾ ಸ್ಟಾಲರ್ ಅವರ ಚುನಾವಣಾ ಯೋಜನೆಗಳಲ್ಲಿ ಕಾಡುಹಂದಿಗಳ ರಕ್ಷಣೆಯೂ ಪ್ರಮುಖವಾಗಿದೆ. ರೋಮ್ ನಗರದ ಹಲವು ಪ್ರದೇಶಗಳಲ್ಲಿ ಕಾಡುಹಂದಿಗಳು ಕಸದ ತೊಟ್ಟಿಗಳಲ್ಲಿರುವ ಆಹಾರವನ್ನು ಹುಡುಕಿಕೊಂಡು ಬರುತ್ತಿವೆ. ಇದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಸ್ವಚ್ಛತೆಯ ಬಗ್ಗೆ ಆತಂಕಗಳು ಎದುರಾಗಿವೆ. ಕೆಲವು ಕಾಡುಹಂದಿಗಳು 100 ಕೆ.ಜಿ.ವರೆಗೂ ತೂಕ ಹೊಂದಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿದ ಕಾಡು ಹಂದಿಗಳ ರಕ್ಷಣೆಗೆ ಒತ್ತು ನೀಡುತ್ತೇನೆ ಎಂದಿ ಸ್ಟಾಲರ್ ಹೇಳಿದ್ದಾರೆ.
ಬಿನ್ ಲಾಡೆನ್, ಸದ್ದಾಂ ಮತ್ತು ಪುಟಿನ್ಗೆ ಸೆಕ್ಸ್ ಆಫರ್ ನೀಡಿದ್ದ ನಟಿ
ಇಲೋನಾ ಸ್ಟಾಲರ್ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗಿದ್ದರು. ಒಸಾಮಾ ಬಿನ್ ಲಾಡೆನ್, ಇರಾಕ್ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೆಕ್ಸ್ ಆಫರ್ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.


