– ಮೊದಲ ಇನ್ನಿಂಗ್ಸ್ನಲ್ಲಿ 246 ರನ್ಗಳಿಗೆ ಇಂಡಿಯಾ ಆಲೌಟ್
ಕ್ರೈಸ್ಟ್ಚರ್ಚ್: ಟೀಂ ಇಂಡಿಯಾ (Team India) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ (Test Match) ಪುಟಿದೆಟ್ಟ ನ್ಯೂಜಿಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. 110 ರನ್ಗಳ ಮುನ್ನಡೆಯೊಂದಿಗೆ ಇಂದು ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ 3ನೇ ದಿನದ ಅಂತ್ಯಕ್ಕೆ 133 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 233 ರನ್ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ.
ಕ್ರೈಸ್ಟ್ ಚರ್ಚ್ನ ಹಗ್ಲೇಯ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಹಿಡಿತ ಸಾಧಿಸಿದೆ. 2ನೇ ಇನ್ನಿಂಗ್ಸ್ನಲ್ಲಿ ನಾಯಕ ಟಾಮ್ ಲಾಥಂ 8 ರನ್ ಗಳಿಸಿ ಮತ್ತೊಮ್ಮೆ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಡಿವೋನ್ ಕಾನ್ವೆ 51 ರನ್, ಹೆನ್ರಿ ನಿಕೋಲ್ಸ್ 22 ರನ್ ಗಳಿಸಿ ಔಟಾದರು. ಇನ್ನೂ ರಚಿನ್ ರವೀಂದ್ (46 ರನ್), ಡೇರಿಲ್ ಮಿಚೆಲ್ (5 ರನ್) ಅಜೇಯರಾಗಿ ಉಳಿದಿದ್ದು, ನಾಳೆ 4ನೇ ದಿನದ ಕ್ರೀಸ್ ಆರಂಭಿಸಲಿದ್ದಾರೆ.
ಟೀಂ ಇಂಡಿಯಾ ಪರ ದ್ವಿತೀಯ ಇನ್ನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ಬ್ಯಾಟ್ ಮಾಡಿದ್ದ ಭಾರತ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ಅನುಭವಿಸಿತ್ತು. 2ನೇ ದಿನದ ಅಂತ್ಯಕ್ಕೆ ಭಾರತ 116 ರನ್ಗಳಿಗೆ ಪ್ರಮುಖ 6 ವಿಕೆಟ್ಗಳನ್ನ ಕಳೆದುಕೊಂಡಿತ್ತು. ಈ ವೇಳೆ 7ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಧ್ರುವ್ ಜುರೆಲ್ ಟೀಂ ಇಂಡಿಯಾಗೆ ಕೊಂಚ ಆಸರೆಯಾದರು. ಕೊನೆಯ ವಿಕೆಟ್ ವರೆಗೂ ಹೋರಾಡಿದ ಜುರೆಲ್ 170 ಎಸೆತಗಳಲ್ಲಿ 14 ಬೌಂಡರಿ ಸಹಿತ 88 ರನ್ ಚಚ್ಚಿದರು. ಇದರಿಂದ ಭಾರತ ಬೃಹತ್ ಹಿನ್ನಡೆ ಅನುಭವಿಸುವುದರಿಂದ ಪಾರಾಯಿತು.
ಜುರೆಲ್ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 246 ರನ್ಗಳಿಗೆ ಆಲೌಟ್ ಆಯಿತು.


