– ಕ್ಷೇತ್ರ ಪುನರ್ವಿಂಗಡಣೆ ತಡೆಯಲು ಮುಂದಾದ ಕಾಂಗ್ರೆಸ್
ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಬೆಂಬಲಿಸಲು ಮುಂದಾಗಿರುವ ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳ ಮನವೊಲಿಸಲು ಕಾಂಗ್ರೆಸ್(Congress) ಕೊನೆಯ ಕ್ಷಣದ ಕಸರತ್ತು ಆರಂಭಿಸಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸೇರಿದಂತೆ ಪ್ರಮುಖ ನಾಯಕರ ಉನ್ನತ ಮಟ್ಟದ ನಿಯೋಗವು ಭಾನುವಾರ (ಇಂದು) ಚೆನ್ನೈನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ಮುಂಬೈನಲ್ಲಿ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಲಿದೆ. ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಕೇವಲ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ ಈ ಮಹತ್ವದ ರಾಜಕೀಯ ನಡೆ ಇಟ್ಟಿದೆ.
ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಇಂದು ಮಧ್ಯಾಹ್ನ 2 ಗಂಟೆಗೆ ಚೆನ್ನೈ ತಲುಪಲಿದ್ದು, ಎಂ.ಕೆ. ಸ್ಟಾಲಿನ್(Stalin) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಸಂಜೆ ಸುಮಾರು 8 ಗಂಟೆಗೆ ಮುಂಬೈಗೆ ತೆರಳಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ ಕೂಡ ಈ ಸಂಧಾನ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾಯಕರ ಪ್ರಯಾಣಕ್ಕಾಗಿ ಎರಡು ವಿಶೇಷ ಚಾರ್ಟರ್ಡ್ ವಿಮಾನಗಳನ್ನು ಬುಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಪ್ರವಾಸದ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ಹೆಸರುಗಳಿವೆ. ಮೈತ್ರಿಕೂಟದಲ್ಲಿ ಒಡಕು ಮೂಡದಂತೆ ತಡೆಯುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಲೋಕಸಭೆಯಲ್ಲಿ 22 ಸಂಸದರನ್ನು ಹೊಂದಿರುವ ಡಿಎಂಕೆ ಮತ್ತು 8 ಸಂಸದರನ್ನು ಹೊಂದಿರುವ ಎನ್ಸಿಪಿ (ಎಸ್ಪಿ) ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಸೂಚಿಸಿರುವುದು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಭಾರಿ ಬಲ ತಂದುಕೊಟ್ಟಿದೆ. ಮುಂದಿನ 25 ವರ್ಷಗಳ ಕಾಲ ತಮಿಳುನಾಡಿನ ಪ್ರಾತಿನಿಧ್ಯಕ್ಕೆ ರಕ್ಷಣೆ ಸಿಕ್ಕಿರುವುದರಿಂದ ಮತ್ತು ರಾಜ್ಯದ ದೀರ್ಘಕಾಲದ ಹಿತಾಸಕ್ತಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ.
ಇದು ಮಸೂದೆ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಮುಂದಾಗಿದ್ದ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೇಶದ ಚುನಾವಣಾ ನಕ್ಷೆಯನ್ನೇ ಬದಲಿಸಿ, ವಿವಿಧ ಸಮುದಾಯಗಳು ಮತ್ತು ಪ್ರದೇಶಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಸೂದೆ ತರುತ್ತಿದೆ ಎಂದು ರಾಹುಲ್ ಗಾಂಧಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಮತ್ತೊಂದೆಡೆ, ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಕೂಡ ಮಸೂದೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ. ಶೇ. 50ರಷ್ಟು ಸ್ಥಾನ ಹೆಚ್ಚಳದ ಸೂತ್ರದಡಿ ಆಂಧ್ರಪ್ರದೇಶದ ಲೋಕಸಭಾ ಸ್ಥಾನಗಳು 25ರಿಂದ 38ಕ್ಕೆ ಏರಿಕೆಯಾಗಲಿವೆ. ಹೀಗಾಗಿ ಈ ಹಿಂದೆಯೂ ಬೆಂಬಲಿಸಿದ್ದೆವು, ಈಗಲೂ ನಮ್ಮ ಬೆಂಬಲ ಮುಂದುವರಿಯಲಿದೆ ಎಂದು ವೈಎಸ್ಆರ್ಸಿಪಿ ರಾಜ್ಯಸಭಾ ಸಂಸದ ವೈ.ವಿ. ಸುಬ್ಬಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

