ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಸುದ್ದಿಗಳು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿವೆ. ಆಧುನಿಕ ಮನುಷ್ಯನಿಗೆ ಏನು ತಿನ್ನಬೇಕು, ಏನು ಕುಡಿಯುಬೇಕು ಎಂಬುದೇ ಗೊಂದಲಕಾರಿಯಾಗಿದೆ. ಎಲ್ಲದಕ್ಕೂ ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಕಲಿ ಔಷಧಿಗಳು, ತರಕಾರಿ-ಹಣ್ಣುಗಳಲ್ಲಿ ಮಿತಿಮೀರಿದ ಕೀಟನಾಶಗಳ ಬಳಕೆ, ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ವಸ್ತುಗಳ ಕಲಬೆರಕೆ, ಆಹಾರ ಪೂರೈಸುವ ಹೋಟೆಲ್ಗಳ ಕಿಚನ್ನಲ್ಲಿನ ದುಸ್ಥಿತಿ.. ಹೀಗೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದಾಂತಹ ಸುದ್ದಿಗಳು ಒಂದರ ಹಿಂದೊಂದರಂತೆ ಬಿತ್ತರಗೊಂಡಿವೆ. ಈಗ ಕುಡಿಯುವ ನೀರಿನ ಸರದಿ ಬಂದಿದೆ. ಬಾಟಲ್ ನೀರಿನ ಮಾದರಿಯಲ್ಲಿ ಕ್ಯಾನ್ಸರ್ಗೆ ಕಾರಣವಾಗಬಹುದಾದ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಾಗಿದೆ ಎಂಬ ಸುದ್ದಿ ಜನರಲ್ಲಿ ಆತಂಕ ಮೂಡಿಸಿದೆ.
ಪ್ರಯಾಣ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಜನರು ಬಾಟಲ್ ನೀರನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಭಾರತದ ಅತಿದೊಡ್ಡ ಬಾಟಲ್ ನೀರು ತಯಾರಿಕಾ ಕಂಪನಿ ‘ಬಿಸ್ಲೆರಿ’ಯೇ ಗಂಭೀರ ಅಪವಾದಕ್ಕೆ ಸಿಲುಕಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಬಿಸ್ಲೆರಿ ಇಂಟರ್ನ್ಯಾಷನಲ್ನ ಪ್ಯಾಕೇಜ್ಡ್ ಕುಡಿಯುವ ನೀರನ್ನು ‘ಅಸುರಕ್ಷಿತ’ ಎಂದು ಗುರುತಿಸಿದೆ. ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಬಿಸ್ಲೆರಿಯೇ ಸುಮಾರು ಶೇಕಡಾ 33ರಷ್ಟು ಪಾಲನ್ನು ಹೊಂದಿದೆ. ಅಂತಹ ಸಂಸ್ಥೆಯ ನೀರೇ ಅಸುರಕ್ಷಿತವಾಗಿರುವುದು ಆತಂಕವನ್ನು ಹೆಚ್ಚಿಸಿದೆ.
ಬಿಸ್ಲೆರಿ ಪ್ಯಾಕೇಜ್ಡ್ ಕುಡಿಯುವ ನೀರು ಅಸುರಕ್ಷಿತ ಏಕೆ? ಎಫ್ಎಸ್ಎಸ್ಎಐ ಪರೀಕ್ಷಾ ವರದಿಯಲ್ಲೇನಿದೆ? ನೀರಲ್ಲಿ ಇರುವಂತಹ ಹಾನಿಕಾರಕ ಅಂಶಗಳೇನು ಮೊದಲಾದ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: ಬಿಸ್ಲೆರಿ ಕಂಪನಿಗೆ ಮತ್ತೆ ಸಂಕಷ್ಟ – ಪಶ್ಚಿಮ ಬಂಗಾಳದಲ್ಲೂ ನೀರಿನ ಮಾದರಿ ಅಸುರಕ್ಷಿತ ಅಂತ ಘೋಷಣೆ
ಏನಿದು ಬಿಸ್ಲೆರಿ ಕೇಸ್?
‘ಎಫ್ಎಸ್ಎಸ್ಎಐ’ ತಿಳಿಸಿರುವಂತೆ, ‘ಮೆಸರ್ಸ್ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ (M/s Bisleri International Pvt. Ltd.) ಘಟಕದಿಂದ ವಿಶ್ಲೇಷಣೆಗಾಗಿ ಪ್ಯಾಕೇಜ್ಡ್ ಕುಡಿಯುವ ನೀರು (ಖನಿಜಯುಕ್ತ ನೀರು ಹೊರತುಪಡಿಸಿ) ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈ ಮಾದರಿಯಲ್ಲಿ ಬ್ರೋಮೇಟ್ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಹೀಗಾಗಿ, ‘ಎಫ್ಎಸ್ಎಸ್ ಕಾಯಿದೆ 2006’ರ ಅಡಿಯಲ್ಲಿ ನೀರನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ. ಆಹಾರ ವ್ಯವಹಾರ ನಿರ್ವಾಹಕರು (FBO) ಮೇಲ್ಮನವಿ ಸಲ್ಲಿಸಿದ ನಂತರ, ಈ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHs) ಪತ್ತೆಯಾದ ಹಿನ್ನೆಲೆಯಲ್ಲಿ, ಈ ನೀರು ಸೇವನೆಗೆ ಸುರಕ್ಷಿತವಲ್ಲ ಎಂದು ದೃಢಪಟ್ಟಿತು. ಪ್ರಯೋಗಾಲಯದ ಈ ಫಲಿತಾಂಶಗಳು, FSS ಕಾಯಿದೆ 2006ರ ಅಡಿಯಲ್ಲಿ ಅಸುರಕ್ಷಿತ ಆಹಾರಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಗಳನ್ನು ಸಾಬೀತುಪಡಿಸಿವೆ. ಹೀಗಾಗಿ, M/s ಬಿಸ್ಲೇರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ FSS ಕಾಯಿದೆ 2006ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.
ಬ್ರೋಮೇಟ್ & PAHಗಳಿಂದ ಆಗೋ ಸಮಸ್ಯೆಗಳೇನು?
ಈ ರಾಸಾಯನಿಕ ಸಂಯುಕ್ತವು ನೈಸರ್ಗಿಕವಾಗಿ ಸಿಗುವ ನೀರಿನಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಬದಲಾಗಿ, ಇದು ಕುಡಿಯುವ ನೀರನ್ನು ಸಂಸ್ಕರಿಸುವ ಪ್ರಕ್ರಿಯೆಗಳಲ್ಲಿ ಸೋಂಕು ನಿವಾರಣೆಯ ಉಪ ಉತ್ಪನ್ನವಾಗಿ ರೂಪುಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಬ್ರೋಮೇಟ್ಟ್ನಿಂದ ಹಲವಾರು ಗಂಭೀರ ಆರೋಗ್ಯ ಅಪಾಯಗಳು ಉಂಟಾಗುತ್ತವೆ. ಇವುಗಳನ್ನು ವಿಷತ್ವ ಮತ್ತು ದೀರ್ಘಕಾಲೀನ ಕ್ಯಾನ್ಸರ್ ಕಾರಕ ಎಂದು ಗುರುತಿಸಲಾಗಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತೀವ್ರ ತೊಂದರೆ (ವಾಕರಿಕೆ, ವಾಂತಿ, ಹೊಟ್ಟೆ ನೋವು, ಅತಿಸಾರ), ಕೇಂದ್ರ ನರಮಂಡಲದ ಕಾರ್ಯಕ್ಷಮತೆ ಕುಂದುವಿಕೆ, ಹೀಮೊಲಿಟಿಕ್ ಅನಿಮಿಯಾ (ಕೆಂಪು ರಕ್ತ ಕಣಗಳು ನಾಶವಾಗುವ ಸ್ಥಿತಿ) ಮತ್ತು ಪಲ್ಮನರಿ ಎಡಿಮಾ (ಶ್ವಾಸಕೋಶಗಳಲ್ಲಿ ಅತಿಯಾಗಿ ದ್ರವ ಸಂಗ್ರಹವಾಗುವುದು) ಉಂಟಾಗುತ್ತವೆ.
ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHಗಳು)- ಇದನ್ನು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಎಂದೂ ಕರೆಯಲಾಗುತ್ತದೆ. 100ಕ್ಕೂ ಹೆಚ್ಚು ವಿಷಕಾರಿ ಸಾವಯವ ರಾಸಾಯನಿಕಗಳ ಒಂದು ಗುಂಪಾಗಿದೆ. ಕಲ್ಲಿದ್ದಲು, ತೈಲ, ಅನಿಲ, ಮರ, ಕಸ ಅಥವಾ ತಂಬಾಕು ಅಪೂರ್ಣವಾಗಿ ಉರಿದಾಗ ಅಥವಾ ಮಾಂಸ ಹಾಗೂ ಇತರ ಆಹಾರ ಪದಾರ್ಥಗಳನ್ನು ಹೆಚ್ಚಿನ ತಾಪಮಾನದಲ್ಲಿ ಸುಟ್ಟು ಕರಕಲಾಗಿಸಿದಾಗ ಇವು ಉತ್ಪತ್ತಿಯಾಗುತ್ತವೆ. ಬಾಟಲ್ ನೀರು ಅಥವಾ ಆಹಾರ ಸುರಕ್ಷತಾ ಎಚ್ಚರಿಕೆಗಳಲ್ಲಿ, PAH ಗಳು ಸಾಮಾನ್ಯವಾಗಿ ಕೈಗಾರಿಕಾ ಅಂತರ್ಜಲ ಮಾಲಿನ್ಯ, ಕಲುಷಿತ ಗಾಳಿ/ಮೇಲ್ಮೈ ಹರಿವು ಅಥವಾ ಸರಿಯಾಗಿ ಸಂಸ್ಕರಿಸದ ಪ್ಯಾಕೇಜಿಂಗ್ ವಸ್ತುಗಳ ಮೂಲಕ ಪ್ರವೇಶಿಸುತ್ತವೆ.
PAHಗಳು ಲಿಪೊಫಿಲಿಕ್ (ಕೊಬ್ಬಿನಲ್ಲಿ ಕರಗುವ) ಸ್ವಭಾವವನ್ನು ಹೊಂದಿರುವುದರಿಂದ ಉಸಿರಾಟದ ಮೂಲಕ ದೇಹದ ಒಳಗೆ ಹೋದಾಗ, ಸೇವಿಸಿದಾಗ ಅಥವಾ ಚರ್ಮದ ಮೂಲಕ ಹೀರಿಕೊಂಡಾಗ ಅವು ಸುಲಭವಾಗಿ ಜೀವಕೋಶ ಪೊರೆಗಳನ್ನು ದಾಟಿ ಕೊಬ್ಬಿನ ಅಂಗಾಂಶಗಳು, ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದನ್ನೂ ಓದಿ: ಬಿಸ್ಲೆರಿ ವಾಟರ್ ಪ್ರಿಯರಿಗೆ ಶಾಕ್ – ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ
* ಕ್ಯಾನ್ಸರ್: ಕ್ಯಾನ್ಸರ್ ಅಪಾಯವು ಇಲ್ಲಿನ ಪ್ರಮುಖ ಮತ್ತು ದೀರ್ಘಕಾಲೀನ ಕಳವಳದ ವಿಷಯವಾಗಿದೆ. ದೇಹದೊಳಗೆ, ಯಕೃತ್ತು PAH ಗಳನ್ನು ಪ್ರತಿಕ್ರಿಯಾಶೀಲ ಸಂಯುಕ್ತಗಳಾಗಿ ಪರಿವರ್ತಿಸುತ್ತದೆ. ಇವು ನೇರವಾಗಿ DNA ಗೆ ಬಂಧಿತಗೊಂಡು, ಶ್ವಾಸಕೋಶ, ಚರ್ಮ, ಮೂತ್ರಕೋಶ ಮತ್ತು ಜಠರಗರುಳಿನ ಕ್ಯಾನ್ಸರ್ಗಳಿಗೆ ಕಾರಣವಾಗುವಂತಹ ಆನುವಂಶಿಕ ರೂಪಾಂತರಗಳನ್ನು ಉಂಟುಮಾಡುತ್ತವೆ.
* ಯಕೃತ್ತು ಮತ್ತು ಮೂತ್ರಪಿಂಡದ ಹಾನಿ: ಯಕೃತ್ತು PAH ಗಳನ್ನು ಒಡೆಯುವುದರಿಂದ ಮತ್ತು ಮೂತ್ರಪಿಂಡಗಳು ಅವುಗಳ ಉಪ-ಉತ್ಪನ್ನಗಳನ್ನು ಫಿಲ್ಟರ್ ಮಾಡುವುದರಿಂದ, ದೀರ್ಘಕಾಲದ ವರೆಗೆ ಎರಡೂ ಅಂಗಗಳ ಮೇಲೆ ಭಾರೀ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ. ಇದು ಯಕೃತ್ತಿನ ವಿಷತ್ವ (ಹೆಪಟೊಟಾಕ್ಸಿಸಿಟಿ) ಮತ್ತು ಮೂತ್ರಪಿಂಡದಲ್ಲಿ ದುರ್ಬಲತೆ ಉಂಟು ಮಾಡುತ್ತದೆ.
* ಹೃದಯ ಸಮಸ್ಯೆಗಳು: PAH ಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಅಥವಾ ಉಸಿರಾಡುವುದರಿಂದ ರಕ್ತನಾಳಗಳಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಉಂಟಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಅಪಧಮನಿ ಕಾಠಿಣ್ಯ (ಅಪಧಮನಿ ಗಟ್ಟಿಯಾಗುವುದು) ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
* ರೋಗನಿರೋಧಕ ಶಕ್ತಿಯ ಕುಂದುವಿಕೆ: PAH ಗಳು ಮೂಳೆ ಮಜ್ಜೆ ಮತ್ತು ಬಿಳಿ ರಕ್ತ ಕಣಗಳ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟುಮಾಡಬಹುದು. ಇದು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸಿ, ವ್ಯಕ್ತಿಗಳು ಸೋಂಕುಗಳಿಗೆ ಹೆಚ್ಚು ತುತ್ತಾಗುವಂತೆ ಮಾಡುತ್ತದೆ.
* ಸ್ತ್ರೀರೋಗ ಶಾಸ್ತ್ರ ಮತ್ತು ಬೆಳವಣಿಗೆಯ ಸಮಸ್ಯೆಗಳು: ಗರ್ಭಾವಸ್ಥೆಯಲ್ಲಿ PAH ಗಳು ಜರಾಯುವನ್ನು ದಾಟಬಹುದು. ಪ್ರಸವಪೂರ್ವ ಮಾನ್ಯತೆ ಕಡಿಮೆ ಜನನ ತೂಕ, ಅಕಾಲಿಕ ಹೆರಿಗೆ ಮತ್ತು ಮಕ್ಕಳಲ್ಲಿ ಬೆಳವಣಿಗೆಯ ಅಥವಾ ನರ ದುರ್ಬಲತೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಬಿಸ್ಲೆರಿ ವಾದ ಏನು?
FSSAI ಸಂಸ್ಥೆಯು ಬಿಸ್ಲೆರಿಗೆ ನೋಟಿಸ್ ಜಾರಿ ಮಾಡಿರುವ ಕುರಿತಾದ ಇತ್ತೀಚಿನ ಮಾಧ್ಯಮ ವರದಿಗಳ ಬಗ್ಗೆ ನಮಗೆ ಅರಿವಿದೆ. ಈ ಪ್ರಕರಣವು ಸುಮಾರು 14 ತಿಂಗಳುಗಳ ಹಿಂದಿನದ್ದು. ಅಂದರೆ, ನಮ್ಮ ಜಾಲದಲ್ಲಿರುವ 143 ಘಟಕಗಳ ಪೈಕಿ ಒಂದಾದ, ಗೋವಾದಲ್ಲಿರುವ ಬಿಸ್ಲೆರಿ ಉತ್ಪಾದನಾ ಘಟಕದಲ್ಲಿ 2025ರ ಸೆಪ್ಟೆಂಬರ್ನಲ್ಲಿ ತಯಾರಾದ ಒಂದು ನಿರ್ದಿಷ್ಟ ಬ್ಯಾಚ್ಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನೀರು ಕುಡಿಯಲು ಯೋಗ್ಯ: ಬಿಸ್ಲೆರಿ ಕಂಪನಿ ಸ್ಪಷ್ಟನೆ
2025ರ ಸೆ.30 ರಂದು, FSSAI ಗೋವಾದಲ್ಲಿರುವ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿತು. ಪ್ರಾಥಮಿಕ ಪರೀಕ್ಷೆಯಲ್ಲಿ ಐದು ಮಾದರಿಗಳು ಎಲ್ಲಾ ಅನ್ವಯವಾಗುವ ಮಾನದಂಡಗಳನ್ನು ಪೂರೈಸಿರುವುದು ಕಂಡುಬಂದಿದೆ. ಆದರೆ ಆರನೇ ಮಾದರಿಯಲ್ಲಿ ಬ್ರೋಮೇಟ್ ಮಟ್ಟವು ಪ್ರತಿ ಲೀಟರ್ಗೆ 12 ಮೈಕ್ರೋಗ್ರಾಂಗಳಷ್ಟಿತ್ತು. ಇದು ನಿಗದಿಪಡಿಸಿದ ಮಿತಿಯಾದ ಪ್ರತಿ ಲೀಟರ್ಗೆ 10 ಮೈಕ್ರೋಗ್ರಾಂಗಳಿಗಿಂತ ಹೆಚ್ಚಾಗಿದೆ. 2025ರ ನವೆಂಬರ್ 22ರಂದು ಬಿಸ್ಲೆರಿ ಸಲ್ಲಿಸಿದ ಮನವಿಯ ಮೇರೆಗೆ, FSSAI ಆ ಮಾದರಿಯನ್ನು ಮರುಪರೀಕ್ಷೆಗಾಗಿ ರೆಫರಲ್ ಪ್ರಯೋಗಾಲಯಕ್ಕೆ ಕಳುಹಿಸಿತು. ರೆಫರಲ್ ಪ್ರಯೋಗಾಲಯವು ಬ್ರೋಮೇಟ್ ಮಟ್ಟಗಳು ನಿಗದಿತ ಮಿತಿಯೊಳಗಿವೆ ಎಂದು ಕಂಡುಕೊಂಡಿತು. ಅದೇ ಸಮಯದಲ್ಲಿ ಮಾದರಿಯಲ್ಲಿ PAH ಇರುವುದನ್ನು ಪ್ರತ್ಯೇಕವಾಗಿ ಗುರುತಿಸಿತು.
ಈ ಎರಡು ಫಲಿತಾಂಶಗಳ ನಡುವಿನ ವ್ಯತ್ಯಾಸವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಸ್ಪಷ್ಟನೆಯ ಅಗತ್ಯವಿದೆ ಎಂದು ಬಿಸ್ಲೆರಿ ತಿಳಿಸಿದೆ. ಅದೇ ಮಾದರಿಯನ್ನು FSSAI-ಅನುಮೋದಿತ ಪ್ರಯೋಗಾಲಯವೊಂದರಲ್ಲಿ ಸ್ವತಂತ್ರವಾಗಿ ಪರೀಕ್ಷಿಸಲು ಕಂಪನಿಯು ವ್ಯವಸ್ಥೆ ಮಾಡಿತು. ಆ ಪರೀಕ್ಷೆಯಲ್ಲಿ ಬ್ರೋಮೇಟ್ ಅಂಶವು ನಿಗದಿತ ಮಿತಿಯೊಳಗೇ ಇರುವುದು ಕಂಡುಬಂದಿದೆ ಎಂದು ಕಂಪನಿ ಹೇಳಿದೆ. ನಾವು 2026ರ ಫೆ.2 ರಂದು ಔಪಚಾರಿಕ ಪತ್ರದೊಂದಿಗೆ, ಸ್ವತಂತ್ರ ಪರೀಕ್ಷಾ ಫಲಿತಾಂಶಗಳನ್ನು FSSAIಯ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಿದೆವು. ಆ ಸಲ್ಲಿಕೆಯ ನಂತರ FSSAI ಯಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಈ ವಿಷಯ ಮುಕ್ತಾಯಗೊಂಡಿದೆ ಎಂದು ನಾವು ಭಾವಿಸಿದೆವು ಎಂದು ಕಂಪನಿಯು ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಸ್ಲೆರಿ ನೀರು ಸೇಫ್: ವರದಿ
ಇಲ್ಲಿಯವರೆಗೆ, ಬಿಸ್ಲೆರಿಗೆ ಇಮೇಲ್ ಮೂಲಕ ಅಥವಾ ಮುದ್ರಿತ ಪ್ರತಿಯ ರೂಪದಲ್ಲಿ ಯಾವುದೇ ನೋಟಿಸ್ ಬಂದಿಲ್ಲ. FSSAI ವೆಬ್ಸೈಟ್ನಲ್ಲಿಯೂ ಅಂತಹ ಯಾವುದೇ ನೋಟಿಸ್ ಕಂಡುಬAದಿಲ್ಲ. ಕುಡಿಯುವ ನೀರಿನ ಸುರಕ್ಷತೆಯು ಬಿಸ್ಲೆರಿಗೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ನಾವು ನಮ್ಮ 10 ಹಂತದ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಕಠಿಣ ಗುಣಮಟ್ಟದ ನಿಯಂತ್ರಣಗಳನ್ನು ಪಾಲಿಸುತ್ತೇವೆ. ಈ ವಿಷಯವನ್ನು ಸೂಕ್ತ ನಿಯಂತ್ರಕ ಪ್ರಕ್ರಿಯೆಯ ಮೂಲಕ ಬಗೆಹರಿಸಲು ನಾವು FSSAI ಜೊತೆ ಸಹಕರಿಸುವುದನ್ನು ಮುಂದುವರಿಸುತ್ತೇವೆ. ದಶಕಗಳಿಂದಲೂ ನಂಬಿಕಾರ್ಹ ಬ್ರಾಂಡ್ ಆಗಿರುವ ಬಿಸ್ಲೆರಿ, ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಬಿಸ್ಲೆರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


