– ಹಿಂದೂ ರಾಷ್ಟ್ರ ನಿರ್ಮಾಣದ ಅಂತಿಮ ಗುರಿ
– ಅನರ್ಹರಾಗಲಿರುವ ಸಂಸದರಿಂದ ಮತದಾನ
ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ(Delimitation Bill) ಪಾಸ್ ಆದ್ರೆ ದೇಶದಲ್ಲಿ ಪ್ರಜಾಪ್ರಭುತ್ವ(Democracy) ಅಂತ್ಯವಾಗಲಿದೆ. ಸಂಸದೀಯ ರಚನೆಯಲ್ಲಿನ ಬದಲಾವಣೆಗಳ ಮೂಲಕ ಬಿಜೆಪಿ(BJP) ರಾಜಕೀಯ ಅಧಿಕಾರವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್(Kapil Sibal) ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ಜನಗಣತಿ ನಡೆಯದ ಕಾರಣ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಸಾಧ್ಯತೆಯಿದೆ. ನ.30ರಂದು 131ನೇ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಭಾರತದಲ್ಲಿ ಅಳಿದುಳಿದಿರುವ ಪ್ರಜಾಪ್ರಭುತ್ವವೂ ಸಂಪೂರ್ಣವಾಗಿ ಅಂತ್ಯವಾಗಲಿದೆ ಎಂದು ಆತಂಕ ಹೊರಹಾಕಿದರು.
ಒಮ್ಮೆ ಮೂರನೇ ಎರಡರಷ್ಟು ಬಹುಮತದಿಂದ ಸಂವಿಧಾನ ತಿದ್ದುಪಡಿಯಾದರೆ, ನಂತರ ಸರಳ ಬಹುಮತದ ಮೂಲಕವೇ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆ ತರಬಹುದು. ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳಿಗೆ ಎಂದಿಗೂ ಬಹುಮತ ಸಿಗದಂತೆ ಕ್ಷೇತ್ರಗಳ ಗಡಿಗಳನ್ನು ಬಿಜೆಪಿಗೆ ಅನುಕೂಲವಾಗುವಂತೆ ಬದಲಾಯಿಸಲಾಗುವುದು ಎಂದು ಅವರು ದೂರಿದ್ದಾರೆ. ಇದನ್ನೂ ಓದಿ: ಏಪ್ರಿಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಮೋದಿ ಸರ್ಕಾರ ಸಜ್ಜು: 360 ಮ್ಯಾಜಿಕ್ ನಂಬರ್ ದಾಟುತ್ತಾ ಎನ್ಡಿಎ?
ಲೋಕಸಭೆಯ(Lok Sabha) ಸದಸ್ಯರ ಸಂಖ್ಯೆಯನ್ನು ಶೇ. 50ರಷ್ಟು, ಅಂದರೆ 840ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಸಿಬಲ್ ಪ್ರಶ್ನಿಸಿದ್ದಾರೆ. ಇದರಿಂದ ತಮಿಳುನಾಡಿನ ಸ್ಥಾನಗಳು 39ರಿಂದ 59ಕ್ಕೆ ಮತ್ತು ಉತ್ತರ ಪ್ರದೇಶದ ಸ್ಥಾನಗಳು 80ರಿಂದ 120ಕ್ಕೆ ಏರಿಕೆಯಾಗಬಹುದು. 840 ಸದಸ್ಯರಿರುವ ಸದನವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಊಹಿಸಿಕೊಳ್ಳಲಾದರೂ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
VIDEO | Delhi: “If the 131st Constitution Amendment Bill is passed, it will mark the end of whatever was left in democracy in India… The road ahead will lead to an autocratic form of government, where decisions will be made at the whims and fancies of the executive”, says Rajya Sabha MP Kapil Sibal.
— Press Trust of India (@PTI_News) November 27, 2026
ಅನರ್ಹರಿಂದ ಮತದಾನ:
ಮಸೂದೆ ಅಂಗೀಕಾರಕ್ಕೆ ಬೇಕಾದ ಸಂಖ್ಯಾಬಲಕ್ಕಾಗಿ ಬಿಜೆಪಿ ವಿರೋಧ ಪಕ್ಷಗಳ ಸಂಸದರ ಪಕ್ಷಾಂತರವನ್ನು ಬಳಸಿಕೊಳ್ಳುತ್ತಿದೆ. ಅನರ್ಹತೆ ಅರ್ಜಿ ಬಾಕಿ ಇರುವ 20 ತೃಣಮೂಲ ಕಾಂಗ್ರೆಸ್ (TMC) ಮತ್ತು 6 ಶಿವಸೇನೆ ಸಂಸದರು ಈ ನಿರ್ಣಾಯಕ ಮತದಾನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಜುಲೈ 2026ರಲ್ಲಿ ಈ ಬಗ್ಗೆ ತಾವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ ವಿಚಾರಣೆ ವಿಳಂಬವಾಗುತ್ತಿದೆ. ಈಗಾಗಲೇ ಅನರ್ಹಗೊಳ್ಳಬೇಕಿದ್ದ 26 ಮಂದಿ ಸಂಸತ್ತಿನಲ್ಲಿ ಕುಳಿತು ಮತ ಚಲಾಯಿಸಲಿದ್ದಾರೆ, ಬಿಜೆಪಿಗೆ(BJP) ಬೇಕಾಗಿರುವುದೂ ಇದೇ ಎಂದು ಅವರು ಕಿಡಿಕಾರಿದರು. ಇದನ್ನೂ ಓದಿ: ದಕ್ಷಿಣ ರಾಜ್ಯಗಳ ಷರತ್ತಿಗೆ ಮಣಿದ ಕೇಂದ್ರ| ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿಗೆ ಸಂಪುಟ ಅಸ್ತು; ಮಹಿಳಾ ಮೀಸಲಾತಿ ಜಾರಿಗೆ ಹಾದಿ ಸುಗಮ
ಹಿಂದೂ ರಾಷ್ಟ್ರ ನಿರ್ಮಾಣದ ಗುರಿ:
2014ರಿಂದಲೂ ಬಿಜೆಪಿ ಸಂವಿಧಾನದ ರಚನೆಯನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿದೆ. ವಿಸ್ತೃತ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದು ಸಂವಿಧಾನಕ್ಕೆ ಮತ್ತಷ್ಟು ತಿದ್ದುಪಡಿ ತರುವುದು ಮತ್ತು ಅಂತಿಮವಾಗಿ ‘ಹಿಂದೂ ರಾಷ್ಟ್ರ’ವನ್ನು ನಿರ್ಮಿಸುವುದೇ ಈ ಎಲ್ಲಾ ಕಸರತ್ತಿನ ಉದ್ದೇಶವಾಗಿದೆ. ಸಂಸತ್ತನ್ನು ಮೂಲೆಗುಂಪು ಮಾಡಿ ಕಾರ್ಯಾಂಗವೇ ಸರ್ವಾಧಿಕಾರ ನಡೆಸುವ ವ್ಯವಸ್ಥೆ ತರಲಾಗುತ್ತಿದೆ ಎಂದು ಅವರು ದೂರಿದರು. ಇದನ್ನೂ ಓದಿ: 2 ಷರತ್ತು ವಿಧಿಸಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ
