– ಬೆಟ್ಟದ ಮೇಲೆ ದೀಪ ಹಚ್ಚಲು ಸಾಧ್ಯವಾಗದ್ದಕ್ಕೆ ಬೇಷರತ್ ಕ್ಷಮೆ
– ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ
ನವದೆಹಲಿ: ತಿರುಪ್ಪರಂಕುಂದ್ರಂ(Thirupparankundram) ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದದಲ್ಲಿ ದೀಪ ಹಚ್ಚಲು ಸಾಧ್ಯವಾಗದ್ದಕ್ಕೆ ಮಧುರೈ ಜಿಲ್ಲಾಡಳಿತ (Madurai District Administration) ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದೆ.
ವಾರ್ಷಿಕ ಕಾರ್ತಿಕ ಮಹಾದೀಪೋತ್ಸವದ ಸಮಯದಲ್ಲಿ ದೀಪ ಬೆಳಗಲು 27 ಸದಸ್ಯರ ತಂಡ ಸಿದ್ಧವಾಗಿತ್ತು. ಆದರೆ ದೇವಸ್ಥಾನದ ಟ್ರಸ್ಟಿಗಳು ಒಪ್ಪಿಗೆ ನೀಡದ ಕಾರಣ ಕಂದಾಯ ಇಲಾಖೆ ಮತ್ತು ಪೊಲೀಸರಿಗೆ ಮಧ್ಯಪ್ರವೇಶಿಸಲು ಯಾವುದೇ ಕಾನೂನು ಅಧಿಕಾರವಿರಲಿಲ್ಲ ಎಂದು ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಸುಪ್ರೀಂ ಕೋರ್ಟ್ಗೆ(Supreme Court) ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ನ. 24ರಂದು ಸಂಜೆ 6 ರಿಂದ 6:30ರ ನಡುವೆ ಒಂದು ಬಾರಿಯ ಆಚರಣೆಯಾಗಿ ದೀಪತ್ತೂಣ್ನಲ್ಲಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ನ.20ರಂದು ಅನುಮತಿ ನೀಡಿತ್ತು. ಆದರೆ ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತಗೊಳಿಸಿದ ತಂಡದಿಂದ ಮಾತ್ರ ದೀಪ ಹಚ್ಚಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು ಎಂದು ಜಿಲ್ಲಾಧಿಕಾರಿ ತಮ್ಮ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ಯಾವುದೇ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶಗಳಿಗೆ ನಾನು ಅತ್ಯುನ್ನತ ಗೌರವ ನೀಡುತ್ತೇನೆ. ದೀಪತ್ತೂಣ್ನಲ್ಲಿ ದೀಪ ಹಚ್ಚಲು ಸಾಧ್ಯವಾಗದಿದ್ದಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ದೇವಸ್ಥಾನದ ಅನುಮತಿ ಪಡೆಯಲು ಜಿಲ್ಲಾಡಳಿತ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು. ಆದರೆ ನವೆಂಬರ್ 24ರಂದು ಧರ್ಮದರ್ಶಿ ಮಂಡಳಿಯು ನಿರ್ಣಯ ಕೈಗೊಂಡು ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಹಚ್ಚಲು ತೀರ್ಮಾನಿಸಿತು ಎಂದು ಕೃಷ್ಣ ವರದಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಹೇಳಿದ ಸ್ಥಳದಲ್ಲಿ ಬೆಳಗಲಿಲ್ಲ ಕಾರ್ತಿಕ ದೀಪ – ಕೋರ್ಟ್ ಆದೇಶ ಧಿಕ್ಕರಿಸಿದ ವಿಜಯ್
ಜಿಲ್ಲಾಧಿಕಾರಿಯ ಅಫಿಡವಿಟ್ನಲ್ಲಿ ಏನಿದೆ?
ನ. 20 ರಿಂದ 24ರ ನಡುವೆ ಪೊಲೀಸ್, ಕಂದಾಯ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಮೂರು ಸಭೆಗಳನ್ನು ನಡೆಸಲಾಗಿತ್ತು. ನ.22ರಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು 27 ಸದಸ್ಯರ ಪೂರ್ವಸಿದ್ಧತಾ ತಂಡ ಮತ್ತು ಇಬ್ಬರು ಅರ್ಚಕರ ನೇತೃತ್ವದ 10 ಸದಸ್ಯರ ದೀಪ ಹಚ್ಚುವ ತಂಡವನ್ನು ಕಳುಹಿಸುವ ಪ್ರಸ್ತಾವನೆ ಸಲ್ಲಿಸಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡಲು 5,000ಕ್ಕೂ ಹೆಚ್ಚು ಪೊಲೀಸರು, 20 ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳು, ವೈದ್ಯಕೀಯ ಮತ್ತು ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿತ್ತು. ನ.23ರ ರಾತ್ರಿಯಿಂದ 25ರ ಬೆಳಿಗ್ಗೆವರೆಗೆ ಬೆಟ್ಟ ಹತ್ತುವುದನ್ನು ನಿಷೇಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ನ.24ರಂದು ಬೆಳಿಗ್ಗೆ 6 ಗಂಟೆಗೆ ಪೂರ್ವಸಿದ್ಧತಾ ತಂಡ ಬೆಟ್ಟ ಹತ್ತದಿದ್ದಾಗ ಗೊಂದಲ ಶುರುವಾಯಿತು. ಬೆಳಿಗ್ಗೆ 10:08ಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಇಮೇಲ್ ಕಳುಹಿಸಿ ತಕ್ಷಣ ತಂಡವನ್ನು ಕಳುಹಿಸುವಂತೆ ಮತ್ತು ವಿಳಂಬಕ್ಕೆ ಲಿಖಿತ ವಿವರಣೆ ನೀಡುವಂತೆ ಕೇಳಲಾಯಿತು. 10 ಸದಸ್ಯರ ತಂಡಕ್ಕೆ ಔಪಚಾರಿಕ ಅನುಮತಿ ಕೋರಿ ಟ್ರಸ್ಟಿಗಳ ಮಂಡಳಿಗೆ ಪತ್ರ ಬರೆಯಲಾಗಿದ್ದು, ಅವರ ನಿರ್ಣಯಕ್ಕಾಗಿ ಕಾಯುತ್ತಿರುವುದಾಗಿ ಅಧಿಕಾರಿ 11:30ಕ್ಕೆ ಉತ್ತರಿಸಿದರು.
ಮಧ್ಯಾಹ್ನ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ನಿಷೇಧಾಜ್ಞೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ ಎಂದು ಎಚ್ಚರಿಸಿತು. ಸಂಜೆ 5:03ಕ್ಕೆ ಜಿಲ್ಲಾಧಿಕಾರಿಗಳು ತುರ್ತು ಇಮೇಲ್ ಕಳುಹಿಸಿ, ಭದ್ರತಾ ತಂಡಗಳು ಬೆಟ್ಟದ ಮೇಲೆ ಕಾಯುತ್ತಿವೆ ಎಂದು ತಿಳಿಸಿದರೂ ಯಾವುದೇ ತಂಡ ಅಲ್ಲಿಗೆ ಬಂದಿರಲಿಲ್ಲ.
ಸಂಜೆ 6 ಗಂಟೆಯ ವೇಳೆ ದೇವಸ್ಥಾನದ ಅರ್ಚಕರು ಬೆಟ್ಟದ ಕಲ್ಲಿನ ಸ್ತಂಭದ ಬದಲಿಗೆ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಮಂಟಪದಲ್ಲೇ ಮಹಾದೀಪವನ್ನು ಬೆಳಗಿಸಿದರು. ರಾತ್ರಿ 8.30ಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ಧರ್ಮದರ್ಶಿ ಮಂಡಳಿಯ ಅವಿರೋಧ ನಿರ್ಣಯದ ವರದಿಯನ್ನು ಸಲ್ಲಿಸಿದರು.
ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಪ್ರಾಚೀನ ಆಗಮ ನಿಯಮಗಳನ್ನು ಅನುಸರಿಸುತ್ತದೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ, ಬೆಟ್ಟದ ಮೇಲಿರುವ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಮೂಲವರ ನೇರ ಮೇಲ್ಭಾಗದಲ್ಲಿ ಕಾರ್ತಿಕ ಮಹಾದೀಪವನ್ನು ಹಚ್ಚಲಾಗುತ್ತದೆ. ಈ ಪ್ರಾಚೀನ ಪದ್ಧತಿ ಮತ್ತು ಆಗಮ ನಿಯಮಗಳೇ ದೇವಸ್ಥಾನದ ವಿಶಿಷ್ಟ ಧಾರ್ಮಿಕ ಗುರುತಾಗಿದೆ ಎಂದು ಮಂಡಳಿ ತಿಳಿಸಿತು.
ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ನೀಡದ ಹೊರತು ಬೇರೆಯವರಿಗೆ ದೀಪ ಹಚ್ಚಲು ಅಧಿಕಾರ ನೀಡುವ ಹಕ್ಕು ಜಿಲ್ಲಾಡಳಿತಕ್ಕೆ ಇರಲಿಲ್ಲ. ಈ ಕಾರಣಕ್ಕೆ ಕೋರ್ಟ್ ಹೇಳಿದ ಜಾಗದಲ್ಲಿ ದೀಪ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
