– ಬಿಸ್ಲೇರಿ ವಿವಾದ ಬೆನ್ನಲ್ಲೇ ದೇಶದ ಎಲ್ಲ ಬ್ರ್ಯಾಂಡ್ಗಳ ನೀರಿನ ಮಾದರಿ ಸಂಗ್ರಹ
ನವದೆಹಲಿ: ಬಿಸ್ಲೇರಿ (Bisleri) ಕುಡಿಯುವ ನೀರಿನ ಗುಣಮಟ್ಟದ ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದೆ.
ದೇಶದಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರ್ಯಾಂಡ್ಗಳ ಬಾಟಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಗುಣಮಟ್ಟದ ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಪ್ರಾಧಿಕಾರ ಮುಂದಾಗಿದೆ. ಇದನ್ನೂ ಓದಿ: ಬಿಸ್ಲೆರಿ ವಾಟರ್ ಪ್ರಿಯರಿಗೆ ಶಾಕ್ – ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ
ಎಫ್ಎಸ್ಎಸ್ಎಐ ಈಗಾಗಲೇ ಹಲವು ಕಂಪನಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಇತ್ತೀಚಿನ ಪರಿಶೀಲನಾ ಕಾರ್ಯಾಚರಣೆಯಲ್ಲಿ ವಿವಿಧ ಬ್ರ್ಯಾಂಡ್ಗಳ ಮಾದರಿಗಳನ್ನು ಯಾದೃಚ್ಛಿಕವಾಗಿ ಸಂಗ್ರಹಿಸಲಾಗಿದೆ. ಪ್ರಯೋಗಾಲಯ ಪರೀಕ್ಷೆಗಳ ವರದಿಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.
ಬಿಸ್ಲೇರಿ ಇಂಟರ್ನ್ಯಾಷನಲ್ ಕಂಪನಿಯ ಉತ್ಪಾದನಾ ಘಟಕದಿಂದ ಸಂಗ್ರಹಿಸಿದ್ದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಅಂಶ ಪತ್ತೆಯಾಗಿತ್ತು. ಪ್ರತಿ ಲೀಟರ್ಗೆ 10 ಮೈಕ್ರೋಗ್ರಾಂ ಇರಬೇಕಾದ ಗರಿಷ್ಠ ಮಿತಿಯ ವಿರುದ್ಧ ಒಂದು ಮಾದರಿಯಲ್ಲಿ 12 ಮೈಕ್ರೋಗ್ರಾಂ ಬ್ರೋಮೇಟ್ ದಾಖಲಾಗಿತ್ತು ಎಂದು ವರದಿಯಾಗಿದೆ. ಈ ಹಿನ್ನೆಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು.ಇದನ್ನೂ ಓದಿ: 7ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ – ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ
ಕಂಪನಿ ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ಮತ್ತೊಂದು ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಪಾಲಿನ್ಯೂಕ್ಲಿಯರ್ ಅರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳ (ಪಿಎಎಚ್) ಅಂಶ ಪತ್ತೆಯಾದ ಹಿನ್ನೆಲೆ ಮಾದರಿಯನ್ನು ಅಸುರಕ್ಷಿತ ಎಂದು ಪರಿಗಣಿಸಲಾಗಿತ್ತು. ಇದರಿಂದ ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಎಫ್ಎಸ್ಎಸ್ಎಐ ಅನುಮತಿ ನೀಡಿದೆ.
ಬಿಸ್ಲೇರಿ ಕಂಪನಿಯ ಸ್ಪಷ್ಟನೆ:
ಕಂಪನಿ ಈ ಆರೋಪಗಳನ್ನು ಪ್ರಶ್ನಿಸಿದೆ. ಗೋವಾ ಘಟಕದಲ್ಲಿ 2025ರ ಸೆಪ್ಟೆಂಬರ್ನಲ್ಲಿ ತಯಾರಿಸಲಾದ ನಿರ್ದಿಷ್ಟ ಬ್ಯಾಚ್ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರಂದು ಸಂಗ್ರಹಿಸಿದ್ದ ಆರು ಮಾದರಿಗಳ ಪೈಕಿ ಐದು ಮಾದರಿಗಳು ನಿಗದಿತ ಗುಣಮಟ್ಟವನ್ನು ಹೊಂದಿದ್ದವು. ಒಂದು ಮಾದರಿಯಲ್ಲಿ ಮಾತ್ರ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಾಗಿತ್ತು ಎಂದು ಕಂಪನಿ ಹೇಳಿದೆ.ಇದನ್ನೂ ಓದಿ: ನೀರು ಕುಡಿಯಲು ಯೋಗ್ಯ: ಬಿಸ್ಲೆರಿ ಕಂಪನಿ ಸ್ಪಷ್ಟನೆ
ನಂತರ ಅನುಮೋದಿತ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲೂ ಬ್ರೋಮೇಟ್ ಅಂಶ ಅನುಮತಿಸಲಾದ ಮಿತಿಯಲ್ಲಿತ್ತು ಎಂದು ಕಂಪನಿ ಪ್ರತಿಪಾದಿಸಿದೆ. ಉತ್ಪಾದನಾ ಪ್ರಕ್ರಿಯೆಯ ಹತ್ತು ಹಂತಗಳಲ್ಲಿ 90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಫ್ಎಸ್ಎಸ್ಎಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದೆ.
ನಕಲಿ ಹೆಸರಿನ ಬ್ರ್ಯಾಂಡ್ಗಳ ಮೇಲೂ ನಿಗಾ:
ಇದೇ ವೇಳೆ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಕುಡಿಯುವ ನೀರಿನ ಕಂಪನಿಗಳ ಹೆಸರನ್ನು ಹೋಲುವ ಹೆಸರುಗಳು ಮತ್ತು ಲೇಬಲ್ಗಳನ್ನು ಬಳಸುತ್ತಿರುವ ಬ್ರ್ಯಾಂಡ್ಗಳ ಬಗ್ಗೆಯೂ ಎಫ್ಎಸ್ಎಸ್ಎಐ ಪರಿಶೀಲನೆ ನಡೆಸುತ್ತಿದೆ. ಗ್ರಾಹಕರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಹೆಸರು ಮತ್ತು ಲೇಬಲ್ ಬಳಸುವ ಕಂಪನಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.ಇದನ್ನೂ ಓದಿ: ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ – ಎಂ.ಬಿ ಪಾಟೀಲ್ ವಿರುದ್ಧ ಶಂಕರ್ ಬಿದರಿ ಕಿಡಿ
