– ನೀರಿನ ಮಾದರಿ ಸುರಕ್ಷಿತವಾಗಿದೆ ಎಂದ ಬಿಸ್ಲೆರಿ
ನವದೆಹಲಿ: ನಮ್ಮ ಕಂಪನಿಯ ನೀರಿನ ಮಾದರಿಯು ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಬಿಸ್ಲೆರಿ (Bisleri) ಕಂಪನಿ ಸ್ಪಷ್ಟಪಡಿಸಿದೆ.
ಬಿಸ್ಲೆರಿ ನೀರಿನ ಮಾದರಿ ಅಸುರಕ್ಷಿತವೆಂದು ಎಫ್ಎಸ್ಎಸ್ಎಐ ಘೋಷಣೆ ಮಾಡಿತ್ತು. ಗುಣಮಟ್ಟದ ನಿಯಮ ಉಲ್ಲಂಘನೆ ಆರೋಪದಡಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಆರೋಪಕ್ಕೆ ಈಗ ಬಿಸ್ಲೆರಿ ಕಂಪನಿ ಸ್ಪಷ್ಟನೆ ಕೊಟ್ಟಿದೆ. ಇದನ್ನೂ ಓದಿ: ಬಿಸ್ಲೆರಿ ವಾಟರ್ ಪ್ರಿಯರಿಗೆ ಶಾಕ್ – ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ
ನಮ್ಮ ಉತ್ಪನ್ನಗಳ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯಲ್ಲಿದೆ ಎಂದು ಕಂಪನಿ ತಿಳಿಸಿದೆ. ಕುಡಿಯುವ ನೀರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಎಫ್ಎಸ್ಎಸ್ಎಐ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕೂಡ ಕಂಪನಿ ಹೇಳಿದೆ.
2025ರ ಸೆಪ್ಟೆಂಬರ್ನಲ್ಲಿ ಗೋವಾ ಘಟಕದಲ್ಲಿ ತಯಾರಾದ ನೀರಿನ ಬ್ಯಾಚ್ಗೆ ಸಂಬಂಧಿಸಿದ ವಿವಾದ ಇದಾಗಿದೆ. ಪ್ರತಿ ಲೀಟರ್ಗೆ 10 ಮೈಕ್ರೋಗ್ರಾಂ ಇರಬೇಕಾದ ಬ್ರೋಮೇಟ್ ಪ್ರಮಾಣ ಆರಂಭಿಕ ಪರೀಕ್ಷೆಯಲ್ಲಿ 12 ಮೈಕ್ರೋಗ್ರಾಂ ದಾಖಲಾಗಿತ್ತು. ಈ ಸಂಬಂಧ ಸ್ವತಂತ್ರ ಪರೀಕ್ಷೆಯ ವರದಿಯನ್ನು ಎಫ್ಎಸ್ಎಸ್ಎಐಗೆ ಸಲ್ಲಿಸಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.
