ಕಾರವಾರ: ಬೆಳೆ ರಕ್ಷಣೆಗಾಗಿ ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ ಕಾಡಾನೆಯೊಂದು ವಿದ್ಯುತ್ ಶಾಕ್ಗೆ ಬಲಿಯಾದ ಘಟನೆ ಶಿರಸಿ (sirsi) ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆದಿದೆ.
ಕಾಡಾನೆಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ರೈತನೋರ್ವ ತನ್ನ ಭತ್ತದ ಗದ್ದೆಯ ಸುತ್ತ ತಂತಿಬೇಲಿ ಅಳವಡಿಸಿದ್ದು, ಇದಕ್ಕೆ ನೇರವಾಗಿ ವಿದ್ಯುತ್ ಹರಿಸಿದ್ದಾನೆ. ಆದರೆ, ಈ ಬೇಲಿಗೆ ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಶಿರಸಿ ವಿಭಾಗದ ಬನವಾಸಿ ವೃತ್ತದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 15 ವರ್ಷದ ಗಂಡಾನೆ ಸಾವು
ಬಂಧಿತರನ್ನು ಮಳಲಗಾಂವ್ನ ಶಿವಪ್ಪ ನಾಯ್ಕ (76) ಹಾಗೂ ಅವರ ಪುತ್ರ ನಾಗರಾಜ್ ನಾಯ್ಕ (40) ಎಂದು ಗುರುತಿಸಲಾಗಿದೆ. ವಿದ್ಯುತ್ ಲೈನ್ನಿಂದ ನೇರವಾಗಿ ಗದ್ದೆಯ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಎಫ್ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಗಂಡಾನೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ. ಇದನ್ನೂ ಓದಿ: ಕಾಪು ಬೀಚ್ನಲ್ಲಿ ಇಬ್ಬರು ಸಮುದ್ರದ ಪಾಲು – ಓರ್ವ ಬಾಲಕನ ರಕ್ಷಣೆ
ಮುಂಡಗೋಡು ಹಾಗೂ ಶಿರಸಿ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟುದ್ದು, ಹಲವು ಕಡೆ ಕೃಷಿ ಜಮೀನಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತಿದ್ದರೂ ಮರಳಿ ಗ್ರಾಮದ ಕೃಷಿ ಜಮೀನಿನತ್ತ ಬರುತ್ತಿವೆ. ಆದರೆ, ಕೆಲವು ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಇತರೆ ಮಾರ್ಗ ಅನುಸರಿಸುವ ಬದಲು ವಿದ್ಯುತ್ ಕಂಬಗಳಿಂದ ನೇರ ವಿದ್ಯುತ್ ಹರಿಸಿ ವನ್ಯಜೀವಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ. ಬನವಾಸಿ ವಲಯ ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
