– ಕೊಲೆಯಾದ ಮಹಿಳೆ ಜೀವಂತ ಪತ್ತೆ ಕೇಸ್
– ಅಮಾನವೀಯ ಟಾರ್ಚರ್ ತಾಳಲಾರದೆ ಕೃತ್ಯ ಒಪ್ಪಿಕೊಂಡ
ಮಂಡ್ಯ: ಕಾನೂನು ರಕ್ಷಿಸಬೇಕಾದ ಪೊಲೀಸರೇ ಕಾನೂನಿನ ಕಣ್ಣಿಗೆ ಮಣ್ಣೆರೆಚಿದರೆ ಏನಾಗಬಹುದು? ಕೇವಲ ಒಂದು ಮಿಸ್ಸಿಂಗ್ ಕೇಸ್(Missing Case) ಮುಗಿಸುವ ಭರದಲ್ಲಿ, ಬದುಕಿದ್ದ ಮಹಿಳೆಯನ್ನು ‘ಕೊಲೆಯಾಗಿದ್ದಾಳೆ’ ಎಂದು ಚಾರ್ಜ್ಶೀಟ್ ಸಲ್ಲಿಸಿ ಅಮಾಯಕ ಯುವಕನನ್ನು ಎರಡೂವರೆ ವರ್ಷ ಜೈಲಿನ ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ್ದರು. ಅಮಾಯಕನಿಗೆ ಥರ್ಡ್ ಡಿಗ್ರಿ ಟಾರ್ಚರ್ ನೀಡಿ ಜೈಲಿಗಟ್ಟಿದ್ದ ಖಾಕಿ ಪಡೆಯ ಬಣ್ಣ, ಅದೇ ಮಹಿಳೆ ಜೀವಂತವಾಗಿ ಪತ್ತೆಯಾಗುವುದರೊಂದಿಗೆ ಈಗ ಬಟಾಬಯಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರ(Pandavapura Police) ಕಟ್ಟುಕಥೆ ಹಾಗೂ ಅಧಿಕಾರದ ದುರ್ಬಳಕೆಯ ಕರಾಳ ಮುಖ ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.
ಕೇಸ್ ಮುಗಿಸುವ ಭರದಲ್ಲಿ ಹೆಣೆದಿದ್ದೇನು?
2019ರಲ್ಲಿ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಜು ಎಂಬ ಮಹಿಳೆ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ಬಳಿಕ 2021ರಲ್ಲಿ ಪಾಂಡವಪುರ ಪೊಲೀಸ್ ಇನ್ಸ್ಪೆಕ್ಟರ್ (PI) ಆಗಿ ಅಧಿಕಾರ ವಹಿಸಿಕೊಂಡ ಪ್ರಭಾಕರ್, ಬಾಕಿ ಇದ್ದ ಈ ನಾಪತ್ತೆ ಪ್ರಕರಣವನ್ನು ಸುಳ್ಳು ಸಾಕ್ಷಿಗಳ ಆಧಾರದ ಮೇಲೆ ಏಕಾಏಕಿ ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿದ್ದರು. ತನಿಖೆಯ ದಿಕ್ಕು ತಪ್ಪಿಸಿ, ಈ ಕೃತ್ಯದ ಹೊಣೆಯನ್ನು ಸ್ಥಳೀಯ ನಿವಾಸಿ ರಾಜೇಶ್ ಎಂಬ ಮುಗ್ಧ ಯುವಕನ ಮೇಲೆ ಹೊರಿಸಲು ಸಂಚು ರೂಪಿಸಿದ್ದರು.
ಬಲವಂತದ ತಪ್ಪೊಪ್ಪಿಗೆ:
ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗೆ ರಾಜೇಶ್ ಅವರನ್ನು ಕರೆತಂದ ಇನ್ಸ್ಪೆಕ್ಟರ್ ಪ್ರಭಾಕರ್, ಬೂಟು ಕಾಲಿನಲ್ಲಿ ತುಳಿದು, ಕರೆಂಟ್ ಶಾಕ್ ನೀಡಿ ತೀವ್ರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. “ಕೊಲೆಯನ್ನು ನಾನೇ ಮಾಡಿದ್ದೇನೆ” ಎಂದು ಒಪ್ಪಿಕೊಳ್ಳುವಂತೆ ತೀವ್ರ ಬೆದರಿಕೆ ಹಾಕಲಾಗಿತ್ತು. ಈ ಅಮಾನವೀಯ ಟಾರ್ಚರ್ ತಾಳಲಾರದೆ ರಾಜೇಶ್, ಪೊಲೀಸರು ಹೇಳಿಕೊಟ್ಟಂತೆ ಸ್ವ-ಇಚ್ಛಾ ಹೇಳಿಕೆ (ತಪ್ಪೊಪ್ಪಿಗೆ) ನೀಡಲು ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು.
ಚಾರ್ಜ್ಶೀಟ್ನಲ್ಲಿ ಏನಿತ್ತು?
ನನಗೂ ಮಂಜು ಜೊತೆ ಅಕ್ರಮ ಸಂಬಂಧವಿತ್ತು. ನನಗೆ ಮದುವೆ ನಿಶ್ಚಯವಾದಾಗ ಸಂಬಂಧ ಕಡಿದುಕೊಳ್ಳುವಂತೆ ಆಕೆಗೆ ತಿಳಿಸಿದ್ದೆ. ಆದರೆ ಆಕೆ ನನ್ನ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಸಿಟ್ಟಿಗೆದ್ದು ಸಂಚು ರೂಪಿಸಿ, ಮಂಜುಳನ್ನು ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಿದೆ. ಘಟನೆ ನಡೆದ ಎರಡು ವರ್ಷಗಳ ನಂತರ ಪರಿಚಯಸ್ಥರಾದ ಗುರು ಕುಮಾರ್ ಮತ್ತು ಅನಂತಪದ್ಮನಾಭ ಎಂಬುವವರ ಬಳಿ ಈ ರಹಸ್ಯ ಹೇಳಿಕೊಂಡಿದ್ದೆ — ಈ ರೀತಿಯಾಗಿ ಪೊಲೀಸರೇ ಹೆಣೆದ ಕಟ್ಟುಕಥೆಯನ್ನೇ ಅಸಲಿ ತಪ್ಪೊಪ್ಪಿಗೆ ಹೇಳಿಕೆ ಎಂದು ಬಿಂಬಿಸಿ, ರಾಜೇಶ್ ಅವರಿಂದ ಬಲವಂತವಾಗಿ ಸಹಿ ಪಡೆದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಖಾಕಿ ಯಡವಟ್ಟು, ನರಕ ಕಂಡ ನಿರಪರಾಧಿ – ಕೊಲೆಯಾದ ಮಹಿಳೆ ಜೀವಂತ ಪ್ರತ್ಯಕ್ಷ
ರಾಜೇಶ್ ಬಂಧನಕ್ಕೆ ಕಾರಣ ಏನು?
ಪಾಂಡವಪುರ ಬಸ್ ನಿಲ್ದಾಣದ ಬಳಿ ಮಂಜು ಅವರು ರಾಜೇಶ್ ಅವರ ಮೊಬೈಲಿನಿಂದ ಕೊನೆಯ ಬಾರಿ ಬಾರಿ ಮೊಬೈಲ್ನಿಂದ ಕರೆ ಮಾಡಿದ್ದರು ಎಂಬ ಅಂಶದ ಆಧಾರದ ಮೇಲೆ, ರಾಗಿಮುದ್ದನಹಳ್ಳಿಯ ರಾಜೇಶ್ ವಿರುದ್ಧ 2021ರಲ್ಲಿ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಶವ ಪತ್ತೆಯಾಗದಿದ್ದರೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಜೀವಂತವಾಗಿ ಸಿಕ್ಕ ಮಹಿಳೆ
ಮಾಡದ ತಪ್ಪಿಗೆ ರಾಜೇಶ್ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಸೆರೆಮನೆಯ ಕತ್ತಲಲ್ಲಿ ನರಳುವಂತಾಯಿತು. ಆದರೆ ಇತ್ತೀಚೆಗೆ, ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಲಾಗಿದೆ ಎನ್ನಲಾದ ಅದೇ ಮಂಜು ಜೀವಂತವಾಗಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಪಾಂಡವಪುರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಹಾಗೂ ಇನ್ಸ್ಪೆಕ್ಟರ್ ಪ್ರಭಾಕರ್ ಹೆಣೆದಿದ್ದ ಇಡೀ ಕಟ್ಟುಕಥೆ ಸಾರ್ವಜನಿಕವಾಗಿ ಬಯಲಾಗಿದೆ.
ಒಟ್ಟಿನಲ್ಲಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾನೂನು ರಕ್ಷಿಸಬೇಕಾದ ಪೊಲೀಸರೇ ತಮ್ಮ ಸ್ವಾರ್ಥಕ್ಕಾಗಿ ಅಮಾಯಕನ ಬದುಕನ್ನು ಬಲಿಪಶು ಮಾಡಿದ್ದಾರೆ. ಎರಡೂವರೆ ವರ್ಷಗಳ ಕಾಲ ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ ರಾಜೇಶ್ ಕಳೆದುಕೊಂಡ ಸಮಯ, ಗೌರವ ಮತ್ತು ನೆಮ್ಮದಿಯನ್ನು ಮರಳಿ ಕೊಡುವವರು ಯಾರು? ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕಿದೆ.
