ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸ್ಟಿಂಗ್ ಆಪರೇಷನ್ (Sting Operation) ನಡೆಸಿ ವಿಡಿಯೋ ಪ್ರಸಾರ ಮಾಡಿದ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ(Kripa Alva) ಅವರಿಗೆ ಬಂಧನ ಭೀತಿ ಎದುರಾಗಿದೆ.
ಕೃಪಾ ಆಳ್ವ ಸೇರಿದಂತೆ 6 ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು(Anticipatory Bail Plea) ಅರ್ಜಿಗಳನ್ನು ಬೆಂಗಳೂರಿನ 66ನೇ ಸಿಸಿಹೆಚ್ (CCH) ಸೆಷನ್ಸ್ ನ್ಯಾಯಾಲಯವು ನವೆಂಬರ್ 20ರಂದು ವಜಾಗೊಳಿಸಿ ಆದೇಶ ಹೊರಡಿಸಿದೆ.ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿರುವ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿಗಳಾದ ಕೃಪಾ ಆಳ್ವ, ಪ್ರಜ್ವಲ್ ಪ್ರಸಾದ್, ಚಂದನ್ ಹೆಚ್.ಎಸ್., ಮೋಹನ್ ಗೌಡ, ಪ್ರಶಾಂತ್ ಕುಮಾರ್ ಮತ್ತು ವಿನೋದ್ ಕುಮಾರ್ ಅವರಿಗೆ ಇದೀಗ ಸಿಸಿಬಿ (CCB) ಪೊಲೀಸರಿಂದ ಬಂಧನವಾಗುವ ಭೀತಿ ಎದುರಾಗಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಹಿಂದೆ ಕೃಪಾ ಆಳ್ವ, ಪ್ರಜ್ವಲ್ ಪ್ರಸಾದ್, ಚಂದನ್, ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೆ ನುಣುಚಿಕೊಂಡಿದ್ದರು ಎನ್ನಲಾಗಿದೆ.
ತನಿಖೆಗೆ ಅತ್ಯಗತ್ಯವಾಗಿದ್ದ ತಮ್ಮ ಮೊಬೈಲ್ ಫೋನ್ಗಳನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲು ಹಿಂದೇಟು ಹಾಕಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡಿರುವುದರಿಂದ, ಬಂಧನದಿಂದ ಪಾರಾಗಲು ಆರೋಪಿಗಳು ಇದೀಗ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
