ಮಂಡ್ಯ: ಖಾಕಿ ಕಣ್ಣುಮುಚ್ಚಿ ಕುಳಿತರೆ ಅಮಾಯಕರ ಬದುಕು ಹೇಗೆ ನರಕವಾಗುತ್ತೆ ಅನ್ನೋದಕ್ಕೆ ಮಂಡ್ಯ (Mandya) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಸಾಕ್ಷಿಯೊಂದು ಸಿಕ್ಕಿದೆ. ಮಹಿಳೆಯೊಬ್ಬಳು ಕೊಲೆಯಾಗಿದ್ದಾಳೆ, ಶವವೇ ಸಿಕ್ಕಿಲ್ಲ ಅಂತ ಪೊಲೀಸರು ಒಬ್ಬ ಅಮಾಯಕ ಯುವಕನ ಮೇಲೆ ಕೊಲೆ ಕೇಸ್ ಜಡಿದು ಜೈಲಿಗೆ ಅಟ್ಟಿದ್ರು. ಬರೋಬ್ಬರಿ ಎರಡೂವರೆ ವರ್ಷ ಆತ ಮಾಡದ ತಪ್ಪಿಗೆ ಜೈಲಿನಲ್ಲಿ ಕೊರಗಿದ. ಆದ್ರೆ, ಇದೀಗ ಯಾವ ಮಹಿಳೆಯನ್ನು ಆತ ಕೊಲೆ ಮಾಡಿದ್ದಾನೆ ಅಂತ ಹೇಳಲಾಗಿತ್ತೋ, ಅದೇ ಮಹಿಳೆ ಈಗ ಸಶರೀರವಾಗಿ ಜೀವಂತವಾಗಿ ಪ್ರತ್ಯಕ್ಷಳಾಗಿದ್ದಾಳೆ.
ಇದು ಯಾವುದೇ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾದ ಕಥೆಯಲ್ಲ. ಬದಲಿಗೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ (Pandavapura) ಖಾಕಿ ಪಡೆ ಬರೆದ ಅಮಾನುಷ ಕರಾಳ ಅಧ್ಯಾಯ. ಘಟನೆಯ ಹಿನ್ನೆಲೆ ನೋಡೋದಾದ್ರೆ, 2019ರಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಎಂಬ ಮಹಿಳೆ ದಿಢೀರ್ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ತಂದೆ ನಾಗರಾಜು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ರು. ಆದ್ರೆ, ಈ ನಾಪತ್ತೆ ಪ್ರಕರಣಕ್ಕೆ ಪೊಲೀಸರು ಬರೋಬ್ಬರಿ ಎರಡು ವರ್ಷಗಳ ಕಾಲ ಯಾವುದೇ ಮುಕ್ತಿ ಕಾಣಿಸಲಿಲ್ಲ. ಕೊನೆಗೆ 2021ರಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ರಾಗಿಮುದ್ದನಹಳ್ಳಿಯ ನಿವಾಸಿ ರಾಜೇಶ್. ಇದನ್ನೂ ಓದಿ: ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುವ ನರರಾಕ್ಷಸ – CRPF ಚೆಕ್ಪೋಸ್ಟ್ ಮೇಲೆ ಉಗ್ರ ಲತೀಫ್ ಭಟ್ನಿಂದ ದಾಳಿ ಶಂಕೆ
ರಾಜೇಶ್ ಮೇಲೆ ಪೊಲೀಸರ ಕಣ್ಣು ಬೀಳಲು ಕಾರಣವಾಗಿದ್ದು ಒಂದೇ ಒಂದು ಫೋನ್ ಕಾಲ್. ಹೌದು, 2019ರಲ್ಲಿ ಮಂಜು ನಾಪತ್ತೆಯಾಗುವ ಮುನ್ನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಯಾರದ್ದೋ ಬಳಿ ಮೊಬೈಲ್ ಪಡೆದು ಕರೆ ಮಾಡಿದ್ದಳು. ಆ ಮೊಬೈಲ್ ಕಾಕತಾಳೀಯವಾಗಿ ಇದೇ ರಾಜೇಶ್ಗೆ ಸೇರಿತ್ತು. ಕೇವಲ ಈ ಒಂದೇ ಒಂದು ಕರೆಯನ್ನು ಆಧಾರವಾಗಿಟ್ಟುಕೊಂಡ ಅಂದಿನ ಪಾಂಡವಪುರ ಪಿಐ ಪ್ರಭಾಕರ್ ಮತ್ತು ತಂಡ, ರಾಜೇಶನೇ ಮಂಜುಳನ್ನು ಕೊಲೆ ಮಾಡಿದ್ದಾನೆ ಎಂದು ಬಿಂಬಿಸಿ ಕೊಲೆ ಪ್ರಕರಣ ದಾಖಲಿಸಿತು. ಇಷ್ಟಕ್ಕೇ ನಿಲ್ಲದ ಪೊಲೀಸರ ಕ್ರೌರ್ಯ, ರಾಜೇಶ್ ಮೇಲೆ ಠಾಣೆಯಲ್ಲಿ ಅಮಾನುಷ ಚಿತ್ರಹಿಂಸೆ ಮುಂದುವರಿಸಿತ್ತು. ಬೂಟುಗಾಲಿನಿಂದ ತುಳಿದು, ಕರೆಂಟ್ ಶಾಕ್ ನೀಡಿ, ಮನೆಯವರನ್ನೂ ಜೈಲಿಗೆ ಹಾಕ್ತೀವಿ ಎಂದು ಬೆದರಿಸಿ, ಮಾಡದ ಕೊಲೆಯನ್ನು ತಾನೇ ಮಾಡಿದ್ದೇನೆ ಎಂದು ರಾಜೇಶ್ನಿಂದ ಬಲವಂತವಾಗಿ ಸ್ವ-ಇಚ್ಛಾ ಹೇಳಿಕೆ ಬರೆಸಿಕೊಂಡ್ರು. ಪೊಲೀಸರ ಈ ಅಟ್ಟಹಾಸಕ್ಕೆ ಹೆದರಿದ ಅಮಾಯಕ ರಾಜೇಶ್, ಕೊನೆಗೆ 2021ರಲ್ಲಿ ಜೈಲು ಪಾಲಾದ.
ಮಾಡದ ತಪ್ಪಿಗೆ ಬರೋಬ್ಬರಿ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ ರಾಜೇಶ್, ಕೊನೆಗೆ 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ ಕೊಲೆಗಾರ ಎಂಬ ಕಳಂಕ ಆತನನ್ನು ಬಿಟ್ಟಿರಲಿಲ್ಲ. ಈ ಕಳಂಕವನ್ನು ತೊಡೆದುಹಾಕಲು ಪಣತೊಟ್ಟ ರಾಜೇಶ್ ಪರ ವಕೀಲ ನಟೇಶ್, ಖಚಿತ ಮಾಹಿತಿ ಬೆನ್ನತ್ತಿ ನಾಗಮಂಗಲದಲ್ಲಿ ಕೊಲೆಯಾಗಿದ್ದಾಳೆ ಎನ್ನಲಾದ ಅದೇ ಮಂಜುಳನ್ನು ಜೀವಂತವಾಗಿ ಪತ್ತೆಹಚ್ಚಿದ್ದಾರೆ.ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ಗೆ ಕೊಲೆ ಬೆದರಿಕೆ – ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ 7 ಕೋಟಿ ರೂ.ಗೆ ಬೇಡಿಕೆ
ಇದಾದ ಬಳಿಕ ತಕ್ಷಣವೇ ಆಕೆಯನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿ ಹೇಳಿಕೆ ದಾಖಲಿಸಲಾಗಿದೆ. ಪೊಲೀಸರ ಮುಂದೆ ಮಂಜು ನೀಡಿರುವ ಹೇಳಿಕೆ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಮನೆಯಲ್ಲಿ ಇಷ್ಟವಿಲ್ಲದ ಮದುವೆ ಮಾಡಿದ್ದ ಕಾರಣಕ್ಕೆ ತಾನೇ ಮನೆಬಿಟ್ಟು ಹೋಗಿದ್ದಾಗಿಯೂ, ಇದೀಗ ಮತ್ತೊಬ್ಬನನ್ನು ಮದುವೆಯಾಗಿ ಸಂಸಾರ ನಡೆಸುತ್ತಿರುವುದಾಗಿಯೂ ಹೇಳಿದ್ದಾಳೆ. ಅಷ್ಟೇ ಅಲ್ಲ, ನನಗೂ ಈ ರಾಜೇಶ್ಗೂ ಯಾವುದೇ ಸಂಬAಧವಿಲ್ಲ, ಆತ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಒಟ್ಟಾರೆ ಮಹಿಳೆ ಜೀವಂತವಾಗಿ ಸಿಕ್ಕಿದ್ದೇನೋ ಸರಿ. ಆದರೆ ಮಾಡದ ತಪ್ಪಿಗೆ ಆ ಯುವಕ ಅನುಭವಿಸಿದ ಎರಡೂವರೆ ವರ್ಷಗಳ ಜೈಲುವಾಸ, ಠಾಣೆಯಲ್ಲಿ ತಿಂದ ಬೂಟಿನೇಟು, ಕರೆಂಟ್ ಶಾಕ್ ಮತ್ತು ಆತನ ಕುಟುಂಬ ಸಮಾಜದಲ್ಲಿ ಅನುಭವಿಸಿದ ಅವಮಾನಕ್ಕೆ ಯಾರು ಹೊಣೆ? ಕೇಸ್ ಮುಗಿಸಲು ಅಮಾಯಕರನ್ನೇ ಕೊಲೆ ಆರೋಪಿಗಳನ್ನಾಗಿ ಮಾಡುವ ಇಂತಹ ಬೇಜವಾಬ್ದಾರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಖಾಕಿ ಪಡೆ ಸನ್ನದ್ಧ – 7 ಸಾವಿರ ಪೊಲೀಸರ ನಿಯೋಜನೆಗೆ ಭರ್ಜರಿ ಸಿದ್ಧತೆ
