ಶ್ರೀನಗರ: ಕಾಶ್ಮೀರದ (Jammu And Kashmir) ಕುಲ್ಗಾಮ್ನಲ್ಲಿರುವ ಸಿಆರ್ಪಿಎಫ್ (CRPF) ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯ (Kulgam Attack) ಹಿಂದೆ ಲಷ್ಕರ್ ಉಗ್ರ ಲತೀಫ್ ಭಟ್ ಕೈವಾಡ ಇರುವ ಬಗ್ಗೆ ಭದ್ರತಾಪಡೆಗಳು ಶಂಕೆ ವ್ಯಕ್ತಪಡಿಸಿವೆ.
ಈತ ಹಠಾತ್ ಗುಂಡಿನ ದಾಳಿ ನಡೆಸಿ, ತಕ್ಷಣ ಪರಾರಿಯಾಗುತ್ತಾನೆ. ನಂತರ ಕೆಲಕಾಲ ಸುಳಿವಿರದಂತೆ ಉಗ್ರರ ಗುಂಪಿನೊಂದಿಗೆ ಬೆರೆಯುತ್ತಾನೆ. ಇದೇ ರೀತಿ ಜುಲೈ ತಿಂಗಳಲ್ಲೂ ಸರಣಿ ದಾಳಿಗಳು ನಡೆದಿದ್ದು, ನ.11 ರ ದಾಳಿ ಸೇರಿದಂತೆ, ಹಿಂದಿನ ಕೆಲವು ದಾಳಿಗಳಿಗೆ ಹೋಲಿಕೆಯಾಗುತ್ತಿದೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: `ನಿಮ್ಮನ್ನು ಸುಮ್ಮನೆ ಬಿಡಲ್ಲʼ – CRPF ಚೆಕ್ಪೋಸ್ಟ್ ಮೇಲೆ ದಾಳಿಗೂ ಮುನ್ನ ಬೆದರಿಕೆ ಹಾಕಿದ್ದ ಬಾಲಕ!
ಕುಲ್ಗಾಮ್ ದಾಳಿಯ ಸಿಸಿಟಿವಿ ದೃಶ್ಯದಲ್ಲಿ 15 ಸೆಕೆಂಡುಗಳಲ್ಲಿ 30 ಗುಂಡುಗಳು ಹಾರಿಸಿರುವುದು ಗೊತ್ತಾಗಿದೆ. ಉಗ್ರರ ದಾಳಿಗೆ ಸಿಆರ್ಪಿಎಫ್ ಯೋಧರು ಪ್ರತಿದಾಳಿ ನಡೆಸಿದ್ದು, ಉಗ್ರರು ಹೆದರಿ ಸ್ಥಳದಿಂದ ಓಡಿಹೋಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ಕುಲ್ಗಾಮ್ ದಾಳಿ ಸ್ಥಳದಿಂದ ವಶಪಡಿಸಿಕೊಂಡ ಕಾರ್ಟ್ರಿಡ್ಜ್ ಕೇಸಿಂಗ್ಗಳು ಹಿಂದಿನ ದಾಳಿಗಳಲ್ಲಿ ವಶಪಡಿಸಿಕೊಂಡ ಕಾರ್ಟ್ರಿಡ್ಜ್ ಕೇಸಿಂಗ್ಗಳಿಗೆ ಹೊಂದಿಕೆಯಾಗುತ್ತಿವೆ. ಇದರಿಂದ ಭಟ್ ಮತ್ತು ಅವನ ಗುಂಪು ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಗೆಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಕುಲ್ಗಾಮ್ ನಿವಾಸಿ ಭಟ್, ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ನಂಬಲಾಗಿದೆ. ಭಟ್ ಈಗಾಗಲೇ ಈ ವರ್ಷ ನಡೆದ ಭಯೋತ್ಪಾದಕ ದಾಳಿಗಳ ಸರಣಿಯಲ್ಲಿ ಭಾಗಿಯಾಗಿದ್ದಾನೆ. ಇದರಲ್ಲಿ ಜುಲೈ 22 ರಂದು ಅನಂತನಾಗ್ನ ಲಾಲ್ ಚೌಕ್ ಪ್ರದೇಶದಲ್ಲಿ ನಡೆದ ಪೊಲೀಸ್ ಕಾನ್ಸ್ಟೆಬಲ್ ಹತ್ಯೆ ಮತ್ತು ಜುಲೈ 31 ರಂದು ಕುಲ್ಗಾಮ್ನಲ್ಲಿ ನಡೆದ ವಲಸೆ ಕಾರ್ಮಿಕರ ಹತ್ಯೆ ಪ್ರಕರಣ ಸೇರಿವೆ.
ಭದ್ರತಾ ಪಡೆಗಳು ಭಟ್ನ ಜಾಲವನ್ನು ಭೇದಿಸಲು ದಕ್ಷಿಣ ಕಾಶ್ಮೀರದಾದ್ಯಂತ ಉಗ್ರರ ಬೆಂಬಲಿಗರ ವಿಚಾರಣೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದೆ, ಭಟ್ನ ಛಾಯಾಚಿತ್ರವನ್ನು ಹೊಂದಿರುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಅವನ ಚಲನವಲನ ಮತ್ತು ಅವನ ಭೂಗತ ಜಾಲದ ಬಗ್ಗೆ ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಇತ್ತೀಚೆಗೆ ಶ್ರೀನಗರದಲ್ಲಿ ಕಾಣಿಸಿಕೊಂಡಿದ್ದ ಉಗ್ರ
ಲತೀಫ್ ಭಟ್ ಇತ್ತೀಚೆಗೆ ಶ್ರೀನಗರದಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿದೆ. ಅದಕ್ಕಾಗಿಯೇ ಪೊಲೀಸರು ನಗರದಾದ್ಯಂತ ಅವನ ಪೋಸ್ಟರ್ಗಳನ್ನು ಅಂಟಿಸಿ, ಮಾಹಿತಿಯನ್ನು ಹಂಚಿಕೊಳ್ಳಲು ಜನರಿಗೆ ತಿಳಿಸಿದ್ದರು.
ಭಟ್ ಜೊತೆಗೆ ಪೋಸ್ಟರ್ಗಳಲ್ಲಿ ಬಾರಾಮುಲ್ಲಾದ ಇತರ ಮೂವರು ವಾಂಟೆಡ್ ಭಯೋತ್ಪಾದಕರ ವಿವರಗಳೂ ಇದ್ದವು, ಅವರು ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (PoK) ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಲತೀಫ್ ಭಟ್ ಯಾರು?
ಲತೀಫ್ ಭಟ್ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಯ ಸದಸ್ಯ. ಈತ ಶೋಪಿಯಾನ್ನಲ್ಲಿ ನಡೆದ ಎನ್ಕೌಂಟರ್ ವೇಳೆ ಬಚಾವ್ ಆಗಿದ್ದ. ಈತನ ಜೊತೆಗಿದ್ದ ಜಕೀರ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಿವಾಸಿಯಾದ ಭಟ್, ಅಶ್ಮುಜಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ. ನಂತರ ಕುಲ್ಗಾಮ್ನ ಸರ್ಕಾರಿ ಪದವಿ ಕಾಲೇಜಿಗೆ ಸೇರಿ, ಅರ್ಧದಲ್ಲೇ ಶಾಲೆಯನ್ನು ತೊರೆದು ಖ್ರೆವಾನ್ನಲ್ಲಿರುವ ಬೀಡಿಂಗ್-ಮೆಷಿನ್ ಘಟಕದಲ್ಲಿ ಬಡಗಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ನವೆಂಬರ್ 19, 2025 ರಂದು ಮನೆಯಿಂದ ಕಾಣೆಯಾಗಿದ್ದ. ಬಳಿಕ ಟಿಆರ್ಎಫ್ ಸಂಘಟನೆಗೆ ಸೇರಿರುವುದು ಗೊತ್ತಾಗಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ CRPF ಶಿಬಿರದ ಮೇಲೆ ಉಗ್ರರಿಂದ ಗುಂಡಿನ ದಾಳಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

