* ಸುಬ್ಬು, ಊಟ ಆಯ್ತಾ? ಬೆನ್ನು ನೋವು ಹೇಗಿದೆ? ಎಂದ ಪವಿತ್ರಾಗೌಡ
* ಮೆಂಟಲಿ ಸ್ಟ್ರಾಂಗ್ ಆಗಿರು, ಹೃದಯ ಗಟ್ಟಿ ಮಾಡ್ಕೊ ಅಂತಾ ಧೈರ್ಯ ಹೇಳಿದ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರೋ ನಟ ದರ್ಶನ್ (Darshan) ಮತ್ತು ಆರೋಪಿ ಪವಿತ್ರಾಗೌಡ ನಡುವಿನ ಮಾತುಕತೆಯ ವಿಚಾರ ಇದೀಗ ಗಮನ ಸೆಳೆದಿದೆ. ಕೋರ್ಟ್ ವಿಚಾರಣೆ ವೇಳೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಇಬ್ಬರೂ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾದ ಮಾತುಕತೆಯ ವಿವರಗಳು ಮುನ್ನೆಲೆಗೆ ಬಂದಿವೆ.
ʻʻಸುಬ್ಬು, ಊಟ ಆಯ್ತಾ…? ಬೆನ್ನು ನೋವು ಹೇಗಿದೆ?ʼʼ ಅಂತಾ ವಿಡಿಯೋ ಕಾನ್ಫರೆನ್ಸ್ನಲ್ಲಿ ಪವಿತ್ರಾಗೌಡ (Pavithra Gowda) ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ʻʻಸುಬ್ಬು, ಊಟ ಆಯ್ತಾ…? ಹೇಗಿದೆ ಬೆನ್ನು ನೋವು…? ಫಿಸಿಯೋಥೆರಪಿ ಆಯ್ತಾ…? ಇನ್ನೂ ಎಷ್ಟು ದಿನ ಮಾಡಿಸಬೇಕು…?ʼʼ ಎಂದು ಪವಿತ್ರಾಗೌಡ, ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಕೂಡ, ʻʻಬೆನ್ನು ಪೂರ್ತಿ ಮುರಿದು ಹೋದಂತಾಗಿದೆ, ನೋವು ಆಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ. ಒಂದು ಸೆಷನ್ ಆಗಿದೆ ಅಷ್ಟೇ, ಇನ್ನೂ ಮಾಡಿಸಬೇಕುʼʼ ಅಂತಾ ಹೇಳಿಕೊಂಡಿದ್ದಾರಂತೆ.
ಇದೇ ವೇಳೆ ಬೇಸರ ಹೊರಹಾಕಿದ ಪವಿತ್ರಾ ಗೌಡ, ʻʻಇನ್ನು ಎಷ್ಟು ದಿನ ಹೀಗೆ ಜೈಲಲ್ಲಿ ಇರಬೇಕುʼʼ ಅಂತಾ ಪವಿತ್ರಾ ಕೇಳಿದಾಗ, ದರ್ಶನ್ ಕೈ ಸನ್ನೆಯ ಮೂಲಕ 4 ಎಂದು ಅಂತಾ ಸೂಚಿಸಿದ್ರಂತೆ. ಇದಕ್ಕೆ ಪವಿತ್ರಾಗೌಡ, ʻʻನಂಗೆ ಇಲ್ಲಿ ಇರೋದಕ್ಕೆ ಆಗ್ತಾ ಇಲ್ಲ, ನರಕ ಆಗ್ತಿದೆʼʼ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ʻʻಇನ್ನೂ 4 – 5 ತಿಂಗಳು ಇರು, ಮೆಂಟಲಿ ಸ್ಟ್ರಾಂಗ್ ಆಗಿರು!ʼʼ
ಇನ್ನೂ ಪವಿತ್ರಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್, ʻʻಇಷ್ಟು ದಿನ ಇದ್ದೀಯಾ, ಇನ್ನೂ 4 ರಿಂದ 5 ತಿಂಗಳು ಇರು. ಮೆಂಟಲಿ ಸ್ಟ್ರಾಂಗ್ ಆಗಿರು, ಹೃದಯ ಗಟ್ಟಿ ಮಾಡ್ಕೊʼʼ ಎಂದು ಧೈರ್ಯ ತುಂಬಿದ್ರಂತೆ.
ವಿಡಿಯೋ ಕಾನ್ಫರೆನ್ಸ್ ಕಟ್ ಆಯ್ತು ಅಂದುಕೊಂಡು ಮಾತುಕತೆ?
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಇಬ್ಬರು, ಕಾನ್ಫರೆನ್ಸ್ ಕಟ್ಟಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಕೆಲವೇ ಕ್ಷಣಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮತ್ತೆ ಸಂಪರ್ಕಕ್ಕೆ ಬಂದ ಕೂಡಲೇ ಇಬ್ಬರೂ ಮೌನವಾಗಿದ್ದಾರೆ ಎಂದು ಮೂಲಗಳಿಂದ ತಿಳಿಬಂದಿದೆ.
