– ಚೀನಾದ ಸ್ಪೈ ಮಹಿಳೆ ಜೊತೆ ಮೊದಲ ವಿವಾಹೇತರ ಸಂಬಂಧ
ಬೀಜಿಂಗ್: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿಯಾದ ಎನ್ವಿಡಿಯಾದ (Nvidia) ಸಿಇಒ ಜೆನ್ಸನ್ ಹುವಾಂಗ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಚೀನಾದ ಸ್ಪೈ ಮಹಿಳೆ ಬಳಿಕ ಕಂಪನಿಯ ಹಿರಿಯ ಅಧಿಕಾರಿಯೊಬ್ಬರೊಂದಿಗೆ ಹುವಾಂಗ್ (Jensen Huang) ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕಂಪನಿಯ ಐವರು ಮಾಜಿ ಉದ್ಯೋಗಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಬಾರಿ ಆರೋಪಕ್ಕೆ ಗುರಿಯಾಗಿರುವ ಮಹಿಳೆಯನ್ನ ಕಿಂಬರ್ಲಿ ಪೊವೆಲ್ (Kimberly Powell) ಎಂದು ಗುರುತಿಸಲಾಗಿದೆ. ಈಕೆ ಎನ್ವಿಡಿಯಾದ ಆರೋಗ್ಯ ಕ್ಷೇತ್ರದ ಉಪಾಧ್ಯಕ್ಷೆಯಾಗಿ (Vice President of Healthcare) ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹೊಸ ಆರೋಪಗಳು ಈಗಾಗಲೇ ವಿವಾದಕ್ಕೆ ಸಿಲುಕಿಕೊಂಡಿರುವ ಜೆನ್ಸನ್ ಹುವಾಂಗ್ಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿವೆ. ಇತ್ತೀಚೆಗಷ್ಟೇ ಜೆನ್ಸನ್ ಚೀನಾದ ಸ್ಪೈ ಮಹಿಳೆ ಆಲಿಸ್ ಹುವಾಂಗ್ ಅವರೊಂದಿಗಿನ ಅಕ್ರಮ ಸಂಬಂಧ ವಿಚಾರವನ್ನ ಒಪ್ಪಿಕೊಂಡಿದ್ದರು. ಎನ್ವಿಡಿಯಾ ಉದ್ಯೋಗಿಗಳಿಗೆ ಕಳುಹಿಸಿದ್ದ ಸಂದೇಶದಲ್ಲಿ ʻನನ್ನ ಪತ್ನಿಗೆ ದ್ರೋಹ ಬಗೆದಿದ್ದೇನೆ, ಇದಕ್ಕೆ ಕ್ಷಮೆಯೇ ಇಲ್ಲ, ನಾನು ನನ್ನ ಪತ್ನಿಗೆ ನಿಷ್ಠೆಯಿಂದ ಇರಲಿಲ್ಲʼ ಎಂದು ಸಂದೇಶದಲ್ಲಿ ಬರೆದಿದ್ದರು. ಹೀಗಾಗಿ ಕಂಪನಿಯ ನೀತಿ ಸಂಹಿತೆಯಂತೆ ಎನ್ವಿಡಿಯಾ ಬೋರ್ಡ್ ಜೆನ್ಸನ್ ಅವರನ್ನ ಹುದ್ದೆಯಿಂದ ಕೆಳಹಿಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಎನ್ವಿಡಿಯಾದ ಜಿಟಿಸಿ ಸಮ್ಮೇಳನದಲ್ಲಿ ನಡೆದಿದ್ದೇನು?
ವರದಿಯ ಪ್ರಕಾರ, ಕಳೆದ ಮಾರ್ಚ್ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ಎನ್ವಿಡಿಯಾದ ವಾರ್ಷಿಕ ಡೆವಲಪರ್ ಸಮ್ಮೇಳನ ನಡೆದಿತ್ತು. ಈ ಸಂದರ್ಭದಲ್ಲಿ, ಹೋಟೆಲ್ವೊಂದರಲ್ಲಿ ಜೆನ್ಸನ್ ಹುವಾಂಗ್ ಮತ್ತು ಕಿಂಬರ್ಲಿ ಪೊವೆಲ್ ಪರಸ್ಪರ ಆತ್ಮೀಯವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು. ಈ ಘಟನೆಯನ್ನ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಕಂಪನಿಯ ಮಾಜಿ ಉದ್ಯೋಗಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಕಂಪನಿಯ ನೀತಿ ಸಂಹಿತೆ ಹೇಳೋದೇನು?
ಈ ಆರೋಪವು ಎನ್ವಿಡಿಯಾದ ಆಂತರಿಕ ಉದ್ಯೋಗ ನೀತಿಗಳ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕಿದೆ. ಕಂಪನಿಯ ನೀತಿ ಸಂಹಿತೆಯ ಪ್ರಕಾರ, ಉದ್ಯೋಗಿಗಳು ವೈಯಕ್ತಿಕ ಸಂಬಂಧಗಳಿಂದ ಸಂಘರ್ಷ ಉಂಟಾಗುವಂತಹ ಸನ್ನಿವೇಶಗಳನ್ನ ತಪ್ಪಿಸಬೇಕು. ಅಲ್ಲದೆ, ಯಾವುದೇ ದುರ್ನಡತೆ ಕಂಡುಬಂದಲ್ಲಿ ಕಂಪನಿಯು ತಕ್ಷಣ ತನಿಖೆ ನಡೆಸಬೇಕು. ಈ ಬಗ್ಗೆ ಮಾಧ್ಯಮಗಳು ಜೆನ್ಸನ್ ಹುವಾಂಗ್ ಅವರನ್ನ ಪ್ರಶ್ನೆ ಮಾಡಿದಾಗ, ನೀವು ನೇರವಾಗಿ ನನ್ನೊಂದಿಗೆ ಮಾತನಾಡಬಾರದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿ, ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕಿಂಬರ್ಲಿ ಪೊವೆಲ್ ಯಾರು?
ಕಿಂಬರ್ಲಿ ಪೊವೆಲ್ ಅವರು 2008 ರಿಂದ ಎನ್ವಿಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕಂಪನಿಯ ಆರೋಗ್ಯ ಕ್ಷೇತ್ರದ ಉಪಾಧ್ಯಕ್ಷೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸೇವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಎನ್ವಿಡಿಯಾದ ಚಿಪ್ ತಂತ್ರಜ್ಞಾನವನ್ನ ಬಳಸಿಕೊಂಡು ಹೊಸ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ. ವಿಶೇಷವಾಗಿ ವೈದ್ಯಕೀಯ ಇಮೇಜಿಂಗ್ (Medical Imaging) ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನ ಅಭಿವೃದ್ಧಿಪಡಿಸುವ ಕೆಲಸದಲ್ಲಿ ಪೊವೆಲ್ ತೊಡಗಿಸಿಕೊಂಡಿದ್ದಾರೆ.
2016ರಲ್ಲಿ ಅವರು ಕೃತಕ ಬುದ್ಧಿಮತ್ತೆ (AI) ವ್ಯವಹಾರ ಅಭಿವೃದ್ಧಿ ವಿಭಾಗದ ಹಿರಿಯ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು. ಬಳಿಕ 2017ರ ಕೊನೆಯಲ್ಲಿ ಆರೋಗ್ಯ ವಿಭಾಗದ ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಹಲವು ಅಂತಾರಾಷ್ಟ್ರೀಯ ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಎನ್ವಿಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಮಾರ್ಚ್ನಲ್ಲಿ ನಡೆದ ಜಿಟಿಸಿ ಸಮ್ಮೇಳನದಲ್ಲಿ ಆರೋಗ್ಯ ಸೇವೆ ಮತ್ತು ಜೈವಿಕ ಸಂಶೋಧನಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತರಬಹುದಾದ ಬದಲಾವಣೆಗಳ ಕುರಿತು ಅವರು ಪ್ರೆಸೆಂಟೇಷನ್ ನೀಡಿದ್ದರು. ಈ ಪ್ರಸ್ತುತಿಯಲ್ಲಿ ಜೆನ್ಸನ್ ಹುವಾಂಗ್ ಅವರ ಕಾರ್ಟೂನ್ ಚಿತ್ರಗಳನ್ನೂ ಬಳಸಲಾಗಿತ್ತು.
ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ಎನ್ಡಿಎಗೆ ಸಹಿ ಹಾಕುವಂತೆ ಒತ್ತಡ?
ಜಿಟಿಸಿ ಸಮ್ಮೇಳನದ ಸಂದರ್ಭದಲ್ಲಿ ಹೋಟೆಲ್ನಲ್ಲಿ ನಡೆದ ಮತ್ತೊಂದು ಘಟನೆಯನ್ನೂ ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಜೆನ್ಸನ್ ಹುವಾಂಗ್ ಅವರ ಭದ್ರತಾ ಸಿಬ್ಬಂದಿ ಹೋಟೆಲ್ನಲ್ಲಿ ಜೆನ್ಸನ್ ಮತ್ತು ಪೊವೆಲ್ ನಡುವಿನ ಆತ್ಮೀಯ ಸಂವಹನವನ್ನ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿರುವುದನ್ನ ಗಮನಿಸಿದ್ದರು. ನಂತರ ಆ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆದೊಯ್ದು, ಗೌಪ್ಯತಾ ಒಪ್ಪಂದಕ್ಕೆ (Non-Disclosure Agreement – NDA) ಸಹಿ ಹಾಕುವಂತೆ ಸೂಚಿಸಲಾಗಿತ್ತು. ಇದೇ ವೇಳೆ, ಜೆನ್ಸನ್ ಹುವಾಂಗ್ ಮತ್ತು ಕಿಂಬರ್ಲಿ ಪೊವೆಲ್ ನಡುವಿನ ಸಂಬಂಧದ ಕುರಿತು ಉದ್ಯೋಗಿಗಳ ವಲಯದಲ್ಲಿಯೂ ಚರ್ಚೆಗಳು ಜೋರಾಗಿದ್ದವು ಎಂದು ವರದಿ ಉಲ್ಲೇಖಿಸಿದೆ.


