– ಭಾರತದ ವಿರುದ್ಧ ಅಪಪ್ರಚಾರದ ಶಂಕೆ
– ಢಾಕಾದಲ್ಲಿ ಸುಮಾರು 150 ಚೀನಿ ಪ್ರಜೆಗಳಿಂದ ನೇರಪ್ರಸಾರ
ನವದೆಹಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ (Dhaka) ಕೆಲವು ಸ್ಲಂ ಪ್ರದೇಶಗಳ ದೃಶ್ಯಗಳನ್ನು ಭಾರತದ (India) ರಾಜಧಾನಿ ನವದೆಹಲಿಯ ದೃಶ್ಯಗಳೆಂದು ಬಿಂಬಿಸಿ ಚೀನಿ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ಚೀನಿ ವೀಕ್ಷಕರಲ್ಲಿ (Chinese Vloggers) ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ಮೂಡಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಢಾಕಾದಲ್ಲಿ ಸುಮಾರು 150 ಚೀನಿ ಪ್ರಜೆಗಳು ವಿವಿಧ ಪ್ರದೇಶಗಳಲ್ಲಿ ವೀಡಿಯೊ ಚಿತ್ರೀಕರಣ ಮತ್ತು ನೇರ ಪ್ರಸಾರದಲ್ಲಿ ತೊಡಗಿದ್ದಾರೆ ಎಂದು ಬಾಂಗ್ಲಾದೇಶದ ‘ಪ್ರಥಮ್ ಆಲೋ’ ಪತ್ರಿಕೆ ನಡೆಸಿದ ತನಿಖಾ ವರದಿ ತಿಳಿಸಿದೆ.
ಢಾಕಾದ ಟೆಕ್ಪಾರಾ ಮತ್ತು ಉತ್ತರಾ ಪ್ರದೇಶಗಳ ಕಿರಿದಾದ ಬೀದಿಗಳು, ಬಡಾವಣೆಗಳು ಹಾಗೂ ಅಲ್ಲಿನ ಜನರ ಜೀವನಶೈಲಿಯನ್ನು ಚಿತ್ರೀಕರಿಸಿ, ಅವುಗಳನ್ನು ನವದೆಹಲಿಯ ದೃಶ್ಯಗಳೆಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ವೇಳೆ ಭಾರತದ ಜನರ ಜೀವನಮಟ್ಟ, ಸ್ವಚ್ಛತೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚೀನಾದ ಸ್ಪೈ ಮಹಿಳೆ ಜೊತೆ ವಿವಾಹೇತರ ಸಂಬಂಧ – ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ತನಿಖೆಗೆ ಆದೇಶ
‘ಮಿಯಾನ್ ಮಿಯಾನ್’ ಎಂಬ ಚೀನಿ ಮಹಿಳೆಯೊಬ್ಬರು ಉತ್ತರಾ ಪ್ರದೇಶದ ಸೆಕ್ಟರ್ 12ರಲ್ಲಿ ನೇರ ಪ್ರಸಾರ ಮಾಡುವಾಗ ಅದನ್ನು ನವದೆಹಲಿ ಎಂದು ಪರಿಚಯಿಸಿದ್ದಾರೆ. ಅಲ್ಲಿನ ಮನೆಗಳು ಕೊಳಕಾಗಿವೆ. ಟಿನ್ ಶೆಡ್ಗಳ ಮನೆಗಳಲ್ಲಿ ಫ್ಯಾನ್ಗಳೂ ಇಲ್ಲ, ಪ್ರದೇಶ ಅತ್ಯಂತ ಹಿಂದುಳಿದಿದೆ ಹಾಗೂ ಸ್ವಚ್ಛತೆಯಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇದೇ ರೀತಿ ಟೆಕ್ಪಾರಾದ ಚಹಾ ಅಂಗಡಿಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದ ‘ವಾಂಗ್ ವೇಯ್’ ಎಂಬ ಚೀನಿ ಪ್ರಜೆಯೊಬ್ಬರು ಸ್ಥಳೀಯರು ಕುಡಿಯುವ ಚಹಾವನ್ನು ಗೋಮೂತ್ರದಿಂದ ತಯಾರಿಸಲಾಗಿದೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಚೀನಾದ ವೀಚಾಟ್, ಡೌಯಿನ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. ಉತ್ಪನ್ನಗಳ ಪ್ರಚಾರಕ್ಕಾಗಿ ಈ ವೀಡಿಯೊಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ‘ಫಾಂಗ್ಯು’ ಎಂಬ ಚೀನಿ ಪ್ರಜೆಯೊಬ್ಬರು ಪ್ರಥಮ್ ಆಲೋ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ, ಬಡಾವಣೆಗಳನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ.
ಈ ಚಟುವಟಿಕೆಗಳು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿವೆ. ಸ್ಥಳೀಯರ ಅನುಮತಿ ಇಲ್ಲದೇ ಮನೆಗಳು, ಅಡುಗೆಮನೆ ಹಾಗೂ ಶೌಚಾಲಯಗಳಲ್ಲಿಯೂ ಚಿತ್ರೀಕರಣ ನಡೆಸಿರುವ ಆರೋಪಗಳಿವೆ. ಕೆಲವು ಸ್ಥಳೀಯ ಮಹಿಳೆಯರು ಚೀನಿ ವ್ಲಾಗರ್ಸ್ಗೆ ಸಹಾಯ ಮಾಡುತ್ತಿದ್ದು, ಇದಕ್ಕಾಗಿ ದಿನಕ್ಕೆ 700ರಿಂದ 800 ಟಾಕಾ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಾಕ್ ನ್ಯೂಸ್ ಆಂಕರ್ಗೆ ಗುಂಡಿಕ್ಕಿ ಹತ್ಯೆ – ಪತಿ ಅರೆಸ್ಟ್
ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಚೀನಿ ಪ್ರಜೆಗಳು ಕಳೆದ ಮೂರು-ನಾಲ್ಕು ತಿಂಗಳುಗಳಿಂದ ನಿರಂತರವಾಗಿ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದಾರೆ. ಅವರು ಏನು ಚಿತ್ರೀಕರಿಸುತ್ತಿದ್ದಾರೆ ಮತ್ತು ಅದರ ಉದ್ದೇಶವೇನು ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಉತ್ತರಾ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಕೂಡ ಪ್ರದೇಶದಲ್ಲಿ ಚೀನಿ ಪ್ರಜೆಗಳು ವೀಡಿಯೊ ಚಿತ್ರೀಕರಣ ನಡೆಸುತ್ತಿರುವುದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ. ಈ ಚಟುವಟಿಕೆಗಳ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಪ್ರದೇಶಗಳನ್ನು ಭಾರತದ ಪ್ರದೇಶಗಳೆಂದು ಬಿಂಬಿಸಿ, ಭಾರತೀಯರ ಜೀವನಶೈಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಉದ್ದೇಶಪೂರ್ವಕ ಅಪಪ್ರಚಾರದ ಭಾಗವೇ ಅಥವಾ ವೈಯಕ್ತಿಕವಾಗಿ ವಿಡಿಯೋ ಮಾಡುತ್ತಿರುವವರ ಚಟುವಟಿಕೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
