ಹಾಸನ: ಐತಿಹಾಸಿಕ ಶ್ರೀ ಹಾಸನಾಂಬ ದೇವಿ(Hasanamba Temple Festival ) ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿದ್ದ ಪ್ರೊ ಕಬಡ್ಡಿ(Pro Kabaddi) ಮಾದರಿಯ ಪಂದ್ಯಾವಳಿಯಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಅಂತಿಮವಾಗಿ ದೆಹಲಿ(Delhi) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬ್ಯಾಂಕ್ ಆಫ್ ಬರೋಡ ಹಾಗೂ ದೆಹಲಿ ತಂಡಗಳ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯದ ವೇಳೆ, ಅಂಪೈರ್ ನೀಡಿದ ತೀರ್ಪಿಗೆ ದೆಹಲಿ ತಂಡದ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್ ತೀರ್ಪನ್ನು ಖಂಡಿಸಿ ದೆಹಲಿ ತಂಡದ ಆಟಗಾರರು ಅಂಕಣದಿಂದ ಹೊರನಡೆದರು. ಇದರಿಂದಾಗಿ ಸ್ಥಳದಲ್ಲಿದ್ದ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಗೊಂದಲಕ್ಕೀಡಾಗಿದ್ದು, ಸುಮಾರು ಎರಡುವರೆ ಗಂಟೆಗಳ ಕಾಲ ಪಂದ್ಯಾವಳಿ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ(Shivalinge Gowda) ಹಾಗೂ ಸಂಸದ ಶ್ರೇಯಸ್ ಪಟೇಲ್(Shreyas Patil) ತಕ್ಷಣವೇ ಪಂದ್ಯಾವಳಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು. ಮುನಿಸಿಕೊಂಡಿದ್ದ ದೆಹಲಿ ತಂಡದ ಆಟಗಾರರೊಂದಿಗೆ ಸಚಿವರು ನೇರವಾಗಿ ಮಾತುಕತೆ ನಡೆಸಿ ಮನವೊಲಿಸುವ ಕಾರ್ಯ ಮಾಡಿದರು.
“ಹಾಸನಕ್ಕೆ ಬಂದ ಅತಿಥಿಗಳನ್ನು ನಾವು ಯಾವತ್ತೂ ಬೇಸರದಿಂದ ಕಳುಹಿಸುವುದಿಲ್ಲ. ಇದರಿಂದ ನಮ್ಮ ಹಾಸನ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಒಂದು ವೇಳೆ ಅಂಪೈರ್ ತಪ್ಪಾಗಿ ತೀರ್ಪು ನೀಡಿದ್ದರೆ ಅದನ್ನು ತಾಯಿ ಹಾಸನಾಂಬೆಯೇ ನೋಡಿಕೊಳ್ಳುತ್ತಾಳೆ” ಎಂದು ಆಟಗಾರರಿಗೆ ಸಮಾಧಾನ ಹೇಳಿದ ಸಚಿವರು, “ಅಂಪೈರ್ ಅವರೇ, ನೀವೂ ಸಹ ಸರಿಯಾಗಿ ಗಮನಿಸಿ ತೀರ್ಪು ನೀಡಿ” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದನ್ನೂ ಓದಿ: ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಡಿಕೆಶಿ ಪುತ್ರ ಆಕಾಶ್
ಅಡಚಣೆಗಳ ನಡುವೆ ಮುಂದುವರಿದ ಈ ಪಂದ್ಯಾವಳಿಯು ಮಧ್ಯರಾತ್ರಿ 1:30ರ ಸುಮಾರಿಗೆ ಮುಕ್ತಾಯಗೊಂಡಿತು. ವಿಶೇಷವೆಂದರೆ, ಪಂದ್ಯಾವಳಿ ಸುಸೂತ್ರವಾಗಿ ಮುಗಿಯುವವರೆಗೂ ಸಚಿವ ಕೆ.ಎಂ. ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಸ್ಥಳದಲ್ಲೇ ಉಪಸ್ಥಿತರಿದ್ದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

