ವಾಷಿಂಗ್ಟನ್/ನವದೆಹಲಿ: ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಉಲ್ಲಂಘಿಸಿ ಸಮುದ್ರ ಮಾರ್ಗದ ಮೂಲಕ ಇರಾನ್(Iran) ತೈಲ ವ್ಯಾಪಾರಕ್ಕೆ ಅಕ್ರಮವಾಗಿ ನೆರವು ನೀಡುತ್ತಿದ್ದ ಭಾರತ ಮೂಲದ ಉದ್ಯಮಿ, ಅವರ ಪತ್ನಿ ಹಾಗೂ ಒಂಬತ್ತು ಭಾರತೀಯ ಕಂಪನಿಗಳ ಮೇಲೆ ಅಮೆರಿಕ ಬುಧವಾರ ಕಠಿಣ ನಿರ್ಬಂಧಗಳನ್ನು (Sanctions) ವಿಧಿಸಿದೆ.
ಟ್ರಂಪ್ ಆಡಳಿತದ ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್ (Operation Economic Outcast) ಕಾರ್ಯಾಚರಣೆಯ ಭಾಗವಾಗಿ ಯುಎಸ್ ಖಜಾನೆ ಇಲಾಖೆ (US Treasury Department) ಈ ಕ್ರಮ ಕೈಗೊಂಡಿದೆ. ಇರಾನ್ನ ತೈಲ ಆದಾಯದ ಮೂಲಗಳನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶದಿಂದ ಈ ನಿರ್ಬಂಧಗಳನ್ನು ಹೇರಲಾಗಿದೆ.
ಚಂಡೀಗಢ ಮೂಲದ ಉದ್ಯಮಿ ಸುನೀಲ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಜಸ್ಪ್ರೀತ್ ಪ್ರೀತಿ ಶಾಹಿದ್ ಈ ಬೃಹತ್ ಅಕ್ರಮ ಜಾಲವನ್ನು ಮುನ್ನಡೆಸುತ್ತಿದ್ದರು ಎಂದು ಅಮೆರಿಕ ಆರೋಪಿಸಿದೆ. ಇರಾನ್ ಸೇನೆ ಮತ್ತು ಅದರ ಬೆಂಬಲಿತ ಸಂಘಟನೆಗಳ ಪರವಾಗಿ ತೈಲ ಸಾಗಿಸುತ್ತಿದ್ದ ಹಡಗುಗಳಿಗೆ ಈ ದಂಪತಿ ನಕಲಿ ಧ್ವಜಗಳು (False Flags) ಹಾಗೂ ನಕಲಿ ಕಡಲ ಪ್ರಮಾಣಪತ್ರಗಳನ್ನು (Maritime Certifications) ಒದಗಿಸುತ್ತಿದ್ದರು ಎನ್ನಲಾಗಿದೆ.
ಈ ದಂಪತಿಯಲ್ಲದೆ, ಜಾಲಕ್ಕೆ ಸಂಬಂಧಿಸಿದ ಭಾರತೀಯರಾದ ಅಶ್ವನಿ ಕುಮಾರ್ ಧಿಮಾನ್, ಈಶ್ಮೀಂದರ್ ಸಿಂಗ್ ಮತ್ತು ಒಂಬತ್ತು ಭಾರತೀಯ ಸಂಸ್ಥೆಗಳ ಹೆಸರನ್ನು ಅಮೆರಿಕ ಪಟ್ಟಿಗೆ ಸೇರಿಸಿದೆ.
ಸುನೀಲ್ ಶರ್ಮಾ ಮತ್ತು ಜಸ್ಪ್ರೀತ್ ಶಾಹಿದ್ ವಿವಿಧ ದೇಶಗಳ ಅಧಿಕೃತ ಸಾಗರ ನೋಂದಣಿ ಪ್ರಾಧಿಕಾರಗಳ ಸೋಗಿನಲ್ಲಿ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿದ್ದರು. ಆಯಾ ದೇಶಗಳ ಯಾವುದೇ ಅನುಮತಿಯಿಲ್ಲದೆ ಹಡಗುಗಳ ನೋಂದಣಿ, ಧ್ವಜ ವಿತರಣೆ ಮತ್ತು ನಾವಿಕರ ತರಬೇತಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದರು.
2014ರಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರ ಡೊಮಿನಿಕಾದ ಮೂಲಕ ಆರಂಭವಾದ ಈ ದಂಧೆ, ನಂತರ ಅರುಬಾ, ಗಯಾನಾ, ಮಾಲಿ, ಮೊಜಾಂಬಿಕ್, ಮಲಾವಿ ಮತ್ತು ತೈಮೋರ್-ಲೆಸ್ಟೆ ಮುಂತಾದ ದೇಶಗಳ ಹೆಸರಿನಲ್ಲೂ ಮುಂದುವರಿದಿತ್ತು. 2023ರಲ್ಲಿ ಸಿಂಗಾಪುರ ಮೂಲದ ‘ಎಸ್ವಾಟಿನಿ ಮ್ಯಾರಿಟೈಮ್ ಅಫೇರ್ಸ್’ ಹೆಸರಿನಲ್ಲಿ ನೋಂದಣಿ ಆರಂಭಿಸಲಾಗಿತ್ತು. ಎಸ್ವಾಟಿನಿ ಸರ್ಕಾರ ಇದನ್ನು ಸಾರ್ವಜನಿಕವಾಗಿ ನಿರಾಕರಿಸಿದರೂ, ಈ ಸಂಸ್ಥೆಯು ಇರಾನ್ ತೈಲ ಹಡಗುಗಳಿಗೆ ಅಕ್ರಮವಾಗಿ ನೋಂದಣಿ ನೀಡುವುದನ್ನು ಮುಂದುವರಿಸಿತ್ತು.
ಈ ಅಕ್ರಮದಲ್ಲಿ ಶಾಮೀಲಾಗಿರುವ ಭಾರತದ ಓಷಿಯಾನಿಕ್ ಟೆಕ್ನಾಲಜೀಸ್ ಇಂಡಿಯಾ, ಆರ್ಯಾವರ್ತ ಶಿಪ್ ಮ್ಯಾನೇಜ್ಮೆಂಟ್, ಪ್ರಿಸೆಪ್ಟ್ ಟ್ರೆಂಡ್ಸ್, ಪಾಲಿನೇಷ್ಯಾ ಮ್ಯಾರಿಟೈಮ್, ಅಲೆಕ್ಸಾರ್ಯ ಫಿನ್ಸರ್ವ್, ಅಲೆಕ್ಸಾರ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್, ವಿಹಾರ ಬೋಟಿಂಗ್ ಹಾಗೂ ಆರ್ಯಾವರ್ತ ಮ್ಯಾರಿಟೈಮ್ ಅಂಡ್ ಎಜುಕೇಷನಲ್ ಟ್ರಸ್ಟ್ ಸೇರಿದಂತೆ 9 ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, “ಇರಾನ್ಗೆ ಭೂಮಿ, ವಾಯು ಅಥವಾ ಸಮುದ್ರ ಮಾರ್ಗದ ಮೂಲಕ ನೆರವು ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅಮೆರಿಕದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ‘ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್’ ಅಡಿಯಲ್ಲಿ ನೀವು ನಮ್ಮ ಪರವಾಗಿರಬೇಕು ಇಲ್ಲವೇ ನಮ್ಮ ವಿರುದ್ಧವಾಗಿರಬೇಕು” ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಇದೇ ಕಾರ್ಯಾಚರಣೆಯಡಿಯಲ್ಲಿ ಇರಾನ್ನ ವಿಮಾನಯಾನ ಕ್ಷೇತ್ರಕ್ಕೆ ನೆರವು ನೀಡುತ್ತಿದ್ದ ಟರ್ಕಿ ಮೂಲದ ‘ಫುಗೋ ಗ್ರೌಂಡ್ ಸರ್ವಿಸಸ್’ ಸಂಸ್ಥೆಯ ಮೇಲೂ ಅಮೆರಿಕ ಪ್ರತ್ಯೇಕವಾಗಿ ನಿರ್ಬಂಧ ವಿಧಿಸಿದೆ. ನಕಲಿ ದಾಖಲೆಗಳೊಂದಿಗೆ ಸಂಚರಿಸುವ ಹಡಗುಗಳು ಅಂತಾರಾಷ್ಟ್ರೀಯ ಸಾಗರ ಸುರಕ್ಷತೆ ಮತ್ತು ಪರಿಸರಕ್ಕೆ ಭಾರಿ ಅಪಾಯವನ್ನುಂಟುಮಾಡುತ್ತಿವೆ ಎಂದು ಯುಎಸ್ ಆತಂಕ ವ್ಯಕ್ತಪಡಿಸಿದೆ.
