ಬೆಂಗಳೂರು: ರಾಜಧಾನಿಯ ಸಾರಿಗೆ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಪ್ರಯಾಣ ದರವನ್ನು ದಿಢೀರ್ ಶೇ. 35ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳು ಬುಧವಾರ ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಹವಾನಿಯಂತ್ರಿತ ಹಾಗೂ ನಿಗದಿತ ಸಮಯಕ್ಕೆ ತಲುಪುವ ನಮ್ಮ ಮೆಟ್ರೋ(Namma Metro) ಪ್ರಯಾಣ ದರಕ್ಕಿಂತಲೂ ಕೆಲ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ದರವೇ ಹೆಚ್ಚು ದುಬಾರಿಯಾಗಿದೆ.
ಸಾಮಾನ್ಯವಾಗಿ ಮೆಟ್ರೋಗಿಂತ ಬಸ್ ಪ್ರಯಾಣ ದರ ಅಗ್ಗವಾಗಿರಬೇಕೆಂಬ ನಿರೀಕ್ಷೆಯ ನಡುವೆ, ಪರಿಷ್ಕೃತ ದರ ಪಟ್ಟಿಯ ಪ್ರಕಾರ ಹಲವು ಮಾರ್ಗಗಳಲ್ಲಿ ಮೆಟ್ರೋಗಿಂತ ಬಿಎಂಟಿಸಿಯೇ ದರ ಹೆಚ್ಚಾಗಿದೆ. ಮೆಜೆಸ್ಟಿಕ್ನಿಂದ ವಿಜಯನಗರಕ್ಕೆ ಮೆಟ್ರೋ ದರ 20 ಇದ್ದರೆ, ಬಿಎಂಟಿಸಿ ಬಸ್ ದರ 25 ರೂ.ಏರಿಕೆಯಾಗಿದೆ. ಮೆಜೆಸ್ಟಿಕ್ನಿಂದ ಜಯನಗರಕ್ಕೆ ಮೆಟ್ರೋ ದರ 30 ರೂ. ಇದ್ದರೆ, ಬಿಎಂಟಿಸಿ ಪ್ರಯಾಣ ದರ 35 ರೂ. ಮುಟ್ಟಿದೆ.
ಹವಾನಿಯಂತ್ರಿತ ವಜ್ರ ಬಸ್ಗಳಲ್ಲೂ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದ್ದು, 5 ಕಿ.ಮೀ.ವರೆಗೆ 5, 6 ರೂ. ನಿಂದ 18 ಕಿ.ಮೀ.ವರೆಗೆ 10 ರೂ. ಹಾಗೂ ದೂರದ ಪ್ರಯಾಣಕ್ಕೆ ಗರಿಷ್ಠ 15 ರವರೆಗೆ ಏರಿಕೆ ಮಾಡಲಾಗಿದೆ
ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳಕ್ಕೆ 55 ರಿಂದ 65 ರೂ, ಬನಶಂಕರಿಯಿಂದ ಐಟಿಪಿಎಲ್: 50 ರಿಂದ 60 ರೂ., ಕೆ.ಆರ್. ಪುರಂನಿಂದ ಸಿಲ್ಕ್ ಬೋರ್ಡ್: 40 ರಿಂದ 55 ರೂ., ಮೆಜೆಸ್ಟಿಕ್ನಿಂದ ಅತ್ತಿಬೆಲೆ 60 ರಿಂದ 70 ರೂ. ಹೆಚ್ಚಿಸಲಾಗಿದೆ.
ಸಾಧಾರಣವಾಗಿ ಮೆಟ್ರೋಗೆ ಹೋಲಿಸಿದರೆ ಬಿಎಂಟಿಸಿ ದರ ಕಡಿಮೆ ಇರುತ್ತದೆ. ಆದರೆ ಈಗ ಕೆಲ ಮಾರ್ಗಗಳಲ್ಲಿ ಬಿಎಂಟಿಸಿ ದರವೇ ಮೆಟ್ರೋಗಿಂತ ದುಬಾರಿಯಾಗಿದೆ.
ನಮ್ಮ ಮೆಟ್ರೋ (Namma Metro) ಪ್ರಯಾಣ ದರವನ್ನು ಈ ವರ್ಷದ ಫೆಬ್ರವರಿಯಲ್ಲಿ ಸುಮಾರು ಶೇ. 5 ರಷ್ಟು ಹೆಚ್ಚಿಸಲಾಗಿತ್ತು. ಕನಿಷ್ಠ ದರ (0-2 ಕಿ.ಮೀ) 10 ರಿಂದ 11 ರೂ.ಗೆ ಏರಿಕೆಯಾದರೆ ಗರಿಷ್ಠ ದರ (30 ಕಿ.ಮೀ ಗಿಂತ ಹೆಚ್ಚು) 90 ರಿಂದ 95 ರೂ. ಏರಿಸಲಾಗಿತ್ತು.
