ಜಗತ್ತಿನಾದ್ಯಂತ ಬಹುನಿರೀಕ್ಷೆ ಹುಟ್ಟುಹಾಕಿದ್ದ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ ರಾಮಾಯಣ(Ramayana) ಇಂದು ಅದ್ಧೂರಿಯಾಗಿ ತೆರೆಕಂಡಿದೆ. ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್(Ranbir Kapoor) ಕಾಂಬಿನೇಷನ್ನ ಈ ಪೌರಾಣಿಕ ಮಹಾಕಾವ್ಯವು ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಂಗೊಳಿಸಿದ್ದರೆ, ಸೀತೆಯಾಗಿ ಸಾಯಿಪಲ್ಲವಿ(Sai Pallavi) ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಲಂಕೇಶ್ವರ ರಾವಣನ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಅವರ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ.
ಸುಮಾರು 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ‘ರಾಮಾಯಣ’ ವಿಶ್ವದಾದ್ಯಂತ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿದೆ. ಭಾರತವೊಂದರಲ್ಲೇ 9 ಸಾವಿರ ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಮನ ದರ್ಶನ ಸಿಗುತ್ತಿದೆ. ವಿಶೇಷವೆಂದರೆ, ಸಿನಿಮಾ ರಿಲೀಸ್ ಆಗುವ ಮುನ್ನವೇ ಮುಂಗಡ ಬುಕಿಂಗ್ ಮೂಲಕವೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇದನ್ನೂ ಓದಿ: ʻರಾಮಾಯಣ ಭಾಗ-3ʼ ಬಗ್ಗೆ ಹಿಂಟ್ ಕೊಟ್ಟ ರಣಬೀರ್ ಕಪೂರ್
ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಪ್ರಮುಖವಾಗಿ ಗಾಂಧಿನಗರದ ಸಂತೋಷ್ ಥಿಯೇಟರ್ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮೊದಲ ಶೋ ಆರಂಭಗೊಂಡಿದ್ದು, ಅಭಿಮಾನಿಗಳ ಸಾಗರವೇ ಹರಿದುಬಂದಿದೆ.
ಥಿಯೇಟರ್ ಆವರಣದಲ್ಲಿ ಯಶ್ ಅವರ ಬೃಹತ್ ಕಟೌಟ್ ಅಳವಡಿಸಲಾಗಿದ್ದು, ನೆಚ್ಚಿನ ನಟನ ಕಟೌಟ್ಗೆ ಅಭಿಮಾನಿಗಳು ಆರತಿ ಎತ್ತಿ, ದೃಷ್ಟಿ ತೆಗೆದು, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಪಟಾಕಿ ಸಿಡಿಸಿ, ಜೈಘೋಷ ಕೂಗುತ್ತಾ ಡೊಳ್ಳು ಕುಣಿತದೊಂದಿಗೆ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮ ಆಚರಿಸಿದ್ದಾರೆ. ಒಟ್ಟಿನಲ್ಲಿ ವಿಶ್ವಮಟ್ಟದಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಮೊದಲ ದಿನವೇ ಭರ್ಜರಿ ಆರಂಭ ಪಡೆದುಕೊಂಡಿದೆ.
