ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣದಲ್ಲಿ ನಟ ಧನ್ವೀರ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ವಿಡಿಯೋ ವೈರಲ್ ಮಾಡುವಲ್ಲಿ ಧನ್ವೀರ್ (Dhanveer) ಅವರ ಮೊಬೈಲ್ ಬಳಕೆಯಾಗಿದೆ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರಿಗೆ ಮೊಬೈಲ್ ರಿಟ್ರೀವ್ ವರದಿ ಕೈ ಸೇರಿದೆ.
ವಿಡಿಯೋ ವೈರಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ, ಅಳಿಸಲಾದ ಡೇಟಾವನ್ನು ಮರುಪಡೆಯಲು ಪೊಲೀಸರು ಮುಂದಾಗಿದ್ದರು.
ಇದೀಗ ಮೊಬೈಲ್ ರಿಟ್ರೀವ್ ವರದಿ ಸಿಸಿಬಿ ಪೊಲೀಸರ ಕೈ ಸೇರಿದ್ದು, ಧನ್ವೀರ್ ಅವರ ಮೊಬೈಲ್ನಿಂದಲೇ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಬಂಧನ ವಾರಂಟ್ ಪಡೆಯಲು ಪೊಲೀಸರು ಮುಂದಾಗಿದ್ದಾರೆ.ಇದನ್ನೂ ಓದಿ: ಅಂಜನಾದ್ರಿ ದೇವಸ್ಥಾನ ಸುಪರ್ದಿ ಜಟಾಪಟಿ – ಕೊಪ್ಪಳ ಡಿಸಿ, ಅರ್ಚಕ ಸೇರಿ ಟ್ರಸ್ಟಿಗಳಿಗೆ ನೋಟಿಸ್
2026ರ ನವೆಂಬರ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಜುಹಾದ್ ಹಮೀದ್, ಅತ್ಯಾಚಾರ ಅಪರಾಧಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಣೆ ಆರೋಪಿ ತರಣ್ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ನಟ ಧನ್ವೀರ್ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ ಮೊಬೈಲ್ ರಿಟ್ರೀವ್ ವರದಿಯಲ್ಲಿ ಸಾಕ್ಷ್ಯ ಲಭ್ಯವಾಗಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.ಇದನ್ನೂ ಓದಿ: ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್ಮುಕ್ತ ಮಾಡಲು ಸಾಧ್ಯವೇ? – ರಾಹುಲ್ ವಾಗ್ದಾಳಿ
