ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ನಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumarswamy) ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಹಿರಿಯೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಹಿರಿಯೂರು ಮತ್ತು ಚಿತ್ರದುರ್ಗದ ಜೆಡಿಎಸ್ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ ಗೆಲುವು ಸುಲಭವಾಗಲಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಹಿರಿಯೂರು ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುತ್ತೇನೆ. ಎರಡು ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಹಿರಿಯೂರು ಕ್ಷೇತ್ರದಲ್ಲೂ ಯಾವುದೇ ಗೊಂದಲವಿಲ್ಲದೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಉಪಚುನಾವಣೆ ಸುಲಭವಲ್ಲ. ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವಿದೆ ಎಂದರು.
ಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಇದೇ ವೇಳೆ ಚಿತ್ರದುರ್ಗ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 2023ಕ್ಕೂ ಮುನ್ನ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿದ್ದ ಸಂದರ್ಭವನ್ನು ನೆನಪಿಸಿಕೊಂಡರು.
ಆ ವೇದಿಕೆಯಲ್ಲಿ ಈಗಿನ ಮುಖ್ಯಮಂತ್ರಿಯೂ ಇದ್ದರು. ಸ್ವಾಮೀಜಿಗಳ ಸಮ್ಮುಖದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಕುಮಾರಸ್ವಾಮಿ, ದೇವೇಗೌಡರು ಮತ್ತು ಎಸ್.ಎಂ. ಕೃಷ್ಣ ಅವರಿಗೆ ಅವಕಾಶ ಕೊಟ್ಟಿದ್ದೀರಿ. ನನಗೂ ಒಂದು ಬಾರಿ ಪೇಪರ್, ಪೆನ್ನು ಕೊಡಿ ಎಂದಿದ್ದರು. ಜನರು ಪೇಪರ್ ಕೊಟ್ಟಿದ್ದಾರೆ. ಅದನ್ನು ಈಗ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಟೀಕಿಸಿದರು.
ಅಪ್ಪರ್ ಭದ್ರಾ ಯೋಜನೆ ವಿಚಾರವಾಗಿಯೂ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ತಮ್ಮ ಮುಖ್ಯಮಂತ್ರಿಯ ಅವಧಿಯಲ್ಲಿ ಯೋಜನೆ ರೂಪಿಸಿ, ಡಿಪಿಆರ್ ಸಿದ್ಧಪಡಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿತ್ತು ಎಂದು ಹೇಳಿದರು.ಇದನ್ನೂ ಓದಿ: ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ನಲ್ಲೇ ವ್ಯವಸ್ಥಿತ ಹುನ್ನಾರ: ಹೆಚ್ಡಿಕೆ
ಈಗ ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಜಲಸಂಪನ್ಮೂಲ ಸಚಿವರಾಗಿದ್ದಾಗ ನೀರು ತುಂಬಿಸಲು ಸಾಧ್ಯವಾಗಲಿಲ್ಲ. ಈಗ ಕೆರೆ ತುಂಬಿಸುತ್ತಾರಂತೆ” ಎಂದು ವ್ಯಂಗ್ಯವಾಡಿದರು. ಒಕ್ಕಲಿಗರ ಸಂಘದ ಜಾಗದ ವಿಚಾರವನ್ನೂ ಪ್ರಸ್ತಾಪಿಸಿ, ಜಾಗ ಸಿಗದಿದ್ದರೂ ಈಗ ಆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಆಗ್ರಹ
ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆ ವಿಚಾರವಾಗಿಯೂ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದರು. ಗುತ್ತಿಗೆದಾರರು ಸುಮಾರು 38 ಸಾವಿರ ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಳುತ್ತಿದ್ದಾರೆ. ಮೊದಲು ಆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದರು.
ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಗುತ್ತಿಗೆದಾರರು ಹಣ ಬಿಡುಗಡೆ ಆಗಿಲ್ಲ ಎಂದು ಹೇಳಿರಲಿಲ್ಲ. ಪ್ರತಿ ತಿಂಗಳ 30ರಂದು ಅವರ ಮನೆ ಬಾಗಿಲಿಗೆ ಚೆಕ್ ಹೋಗುತ್ತಿತ್ತು. ಆದರೆ ಈ ಸರ್ಕಾರ ಮೂರು ವರ್ಷಗಳಾದರೂ ಹಳೆಯ ಬಿಲ್ಗಳನ್ನು ಕ್ಲಿಯರ್ ಮಾಡಿಲ್ಲ. ಬಿಜೆಪಿ ಮೇಲೆ ಆರೋಪ ಮಾಡುತ್ತಾರೆ. ಈಗ ನೀವು ಮಾಡುತ್ತಿರುವುದೇನು? ಎಷ್ಟು ಕೋಟಿ ಸಾಲ ಮಾಡುತ್ತಿದ್ದೀರಿ? ಸಾಲ ಮಾಡಿ ಯಾರಿಗೆ ಹಣ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ತೆಲಂಗಾಣದಲ್ಲಿ ಆಸ್ತಿ ವಿವಾದಕ್ಕೆ ಮಹಿಳೆಯ ಶಿರಚ್ಛೇದನ – ಪತಿಯ ಅಣ್ಣಂದಿರಿಂದಲೇ ಹತ್ಯೆ
ಶಂಕುಸ್ಥಾಪನೆ ಹೆಸರಿನಲ್ಲಿ ಸಾಲ ಮಾಡಿ ಕಮಿಷನ್ ಪಡೆಯಲು ಜನರು ಪೇಪರ್ ಮತ್ತು ಪೆನ್ನು ಕೊಟ್ಟಿದ್ದಾರೆಯೇ ಎಂದು ಸಿಎಂ ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಕುಮಾರಸ್ವಾಮಿ, ಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
