– ಸತತ 3ನೇ ಬಾರಿ ಭಾರತಕ್ಕೆ ಒಲಿದ ಐಎಸ್ಎ ಅಧ್ಯಕ್ಷ ಸ್ಥಾನ
– ಶೃಂಗಸಭೆಯಲ್ಲಿ 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳ ಒಮ್ಮತದ ಆಯ್ಕೆ
ನವದೆಹಲಿ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ (International Solar Alliance) ಅಧ್ಯಕ್ಷತೆಗೆ ಭಾರತ ಮಗದೊಮ್ಮೆ ಸರ್ವ ಸಮ್ಮತದಿಂದ ಆಯ್ಕೆಯಾಗಿದೆ. 130ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಸೇರಿದ್ದ 139ನೇ ಶೃಂಗಸಭೆಯಲ್ಲಿ ಭಾರತವನ್ನು ಪುನರಾಯ್ಕೆ ಮಾಡಲಾಗಿದೆ.
ಸತತ ಮೂರನೇ ಬಾರಿಗೆ ಐಎಸ್ಎ ಅಧ್ಯಕ್ಷತೆ ಭಾರತದ ಮಡಿಲಿಗೆ ಬಂದಿದ್ದು, ದೆಹಲಿಯ ಭಾರತ್ ಮಂಟಪದಲ್ಲಿ ಜರುಗುತ್ತಿರುವ ಶೃಂಗಸಭೆಯಲ್ಲಿ ಈ ಐತಿಹಾಸಿಕ ನಿರ್ಣಯಕ್ಕೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯ ರಾಷ್ಟ್ರಗಳು ಸಂತಸ ವ್ಯಕ್ತಪಡಿಸಿದವು.
130ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅತಿದೊಡ್ಡ ಸಮಾವೇಶದಲ್ಲಿ ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಅಗಾಧ ಸಾಧನೆಗೆ ಬಹುಪರಾಕ್ ಘೋಷಣೆ ಮೊಳಗಿತು. ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಐಎಸ್ಎ ಒಕ್ಕೂಟ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಭಾರತವನ್ನೇ ಮರು ಆಯ್ಕೆ ಘೋಷಿಸಿದ್ದು ವಿಶೇಷವಾಗಿತ್ತು. ಭಾರತದ ಪಾಲಿಗಿದು ಐತಿಹಾಸಿಕ ದಿನವಾಗಿ ಕಂಗೊಳಿಸಿತು. ಇದನ್ನೂ ಓದಿ: ಪ್ರತಿಭಟನೆ ನಡೆಸುವ ಸ್ಥಳವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸುವಂತಿಲ್ಲ: ಸುಪ್ರೀಂ
ಸೌರಶಕ್ತಿ, ಪವನ ಶಕ್ತಿ, ಹಸಿರು ಹೈಡ್ರೋಜನ್ ಹೀಗೆ ನವೀಕರಿಸಬಹುದಾದ ಇಂಧನದ ಭಾರತದ ಗುರಿ ಮೀರಿದ ಸಾಧನೆ, ಪೂರೈಕೆ ಬದ್ಧತೆ, ಸಿಒಪಿ-26ರಲ್ಲಿ 2030ರೊಳಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಗುರಿ, 1 ಕೋಟಿ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಒದಗಿಸುವ ಸೂರ್ಯಘರ್, ಕೃಷಿ ಪಂಪ್ ಸೆಟ್ಗಳಿಗೆ ಪಿಎಂ ಕುಸುಮ್ ಯೋಜನೆ ಎಲ್ಲವನ್ನೂ ಕಂಡು ಬೆರಗಾದ ವಿದೇಶಗಳು ಸತತ ಮೂರನೇ ಬಾರಿ ಅಂತಾರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನೇ ಮರು ಆಯ್ಕೆ ಮಾಡಿವೆ.
ಪ್ರಸ್ತುತ ಜಾಗತಿಕ ಇಂಧನ ಬಿಕ್ಕಟ್ಟು ನಡುವೆಯೂ ಭಾರತದ ಆರ್ಥಿಕತೆ, ಇಂಧನ ಸಾಮರ್ಥ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವ ಮತ್ತು ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರ ಸೌರಕ್ರಾಂತಿ ಕಾರ್ಯತತ್ಪರತೆಗೆ ಪ್ರಶಂಸೆ ತೋರಿದವು.
ಸತತ ಮೂರನೇ ಬಾರಿ ಐಎಸ್ಎ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನೇ ಸರ್ವ ಸಮ್ಮತದಿಂದ ಆಯ್ಕೆ ಮಾಡಿದ ಸದಸ್ಯ ರಾಷ್ಟ್ರಗಳಿಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅನಂತ ಧನ್ಯವಾದ ಅರ್ಪಿಸಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆಗೆ ಭಾರತವನ್ನು ಪುನರಾಯ್ಕೆ ಮಾಡಿರುವುದು ಜಾಗತಿಕವಾಗಿ ಭಾರತದ ಮೇಲಿರುವ ನಂಬಿಕೆಗೆ ಪ್ರತೀಕವಾಗಿದೆ ಎಂದು ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ.
ವಿದೇಶಗಳು ಸೌರಕ್ರಾಂತಿ ಮತ್ತು ನವೀಕರಿಸಬಹುದಾದ ಇಂಧನ ಮಹತ್ಸಾಧನೆಗಾಗಿ ಭಾರತದ ಮೇಲೆ ಅದಮ್ಯ ನಂಬಿಕೆಯಿಟ್ಟಿದ್ದು, ಮತ್ತೊಮ್ಮೆ ಭಾರತವನ್ನು ISA ಅಧ್ಯಕ್ಷತೆಯ ಮೂರನೇ ಅವಧಿಗೆ ಮರು ಆಯ್ಕೆ ಮಾಡಿದ ಎಲ್ಲಾ ಸದಸ್ಯ ದೇಶಗಳಿಗೆ ಅಭಿನಂದನೆ ಹಾಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ. ಇದನ್ನೂ ಓದಿ: ಆಂಧ್ರದ ಶಾಲಾ ಬಾಲಕಿ ಕೊಲೆ ಯತ್ನ ಪ್ರಕರಣ; ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಗ್ಯದಲ್ಲಿ ಸುಧಾರಣೆ
ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸತತ ಮೂರನೇ ಬಾರಿ ಆಯ್ಕೆ ಮಾಡಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ಕ್ಷಣ. ಇದು ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿರುವ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಾಗತಿಕ ಸೌರ ಸಹಭಾಗಿತ್ವವನ್ನು ಬಲಪಡಿಸಲು ಮತ್ತು ಪ್ರತಿಯೊಂದು ದೇಶಕ್ಕೆ, ವಿಶೇಷವಾಗಿ ‘ಗ್ಲೋಬಲ್ ಸೌತ್’ (ಬೆಳೆಯುತ್ತಿರುವ ರಾಷ್ಟ್ರಗಳಿಗೆ) ತಲುಪುವಂತೆ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

