– ಮುಂಗಡ ಬುಕಿಂಗ್ನಲ್ಲಿ ಕರ್ನಾಟಕವೇ ಟಾಪ್
– ವಿದೇಶಗಳಲ್ಲೂ ‘ರಾಮಾಯಣ’ ಹವಾ
ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಹಾಗೂ ರಾಕಿಂಗ್ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ: ಭಾಗ 1’ (Ramayana: Part 1)ನವೆಂಬರ್ 5ರಂದು ಬಿಡುಗಡೆಯಾಗಲಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕಿಂಗ್ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಚಿತ್ರದ ಟಿಕೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಭಾರತದಲ್ಲಿ ಐದು ಪ್ರದರ್ಶನ ದಿನಾಂಕಗಳ ಮುಂಗಡ ಬುಕಿಂಗ್ನಿಂದ ಚಿತ್ರವು ಒಟ್ಟು 73.40 ಕೋಟಿ ರೂ. ಗಳಿಸಿದೆ. ಇದರಲ್ಲಿ ಬ್ಲಾಕ್ ಸೀಟ್ಗಳನ್ನು ಹೊರತುಪಡಿಸಿದರೆ 58.57 ಕೋಟಿ ಮೊತ್ತದ ಟಿಕೆಟ್ಗಳು ಬುಕ್ ಆಗಿವೆ. ಪ್ರೀಮಿಯರ್ ದಿನದ ಮುಂಗಡ ಬುಕಿಂಗ್ 32.41 ಕೋಟಿ ರೂ. ತಲುಪಿದೆ.
ಇದುವರೆಗೆ ದೇಶಾದ್ಯಂತ 60,124 ಪ್ರದರ್ಶನಗಳಿಗೆ 18.67 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ.
ಮುಂಗಡ ಬುಕಿಂಗ್ನಲ್ಲಿ ಕರ್ನಾಟಕವೇ ಟಾಪ್
ರಾಜ್ಯವಾರು ಮೊದಲ ದಿನದ ಮುಂಗಡ ಬುಕಿಂಗ್ ಗಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 5.90 ಕೋಟಿ ಮೊತ್ತದ ಟಿಕೆಟ್ಗಳು ಬುಕ್ ಆಗಿದ್ದರೆ, ಮಹಾರಾಷ್ಟ್ರದಲ್ಲಿ 5.59 ಕೋಟಿ ಮತ್ತು ದೆಹಲಿಯಲ್ಲಿ 4.34 ಕೋಟಿ ಮೊತ್ತದ ಟಿಕೆಟ್ಗಳು ಮಾರಾಟವಾಗಿವೆ. ತೆಲಂಗಾಣ 2.59 ಕೋಟಿ ರೂಪಾಯಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಹಿಂದಿ ಆವೃತ್ತಿಗೆ ಭರ್ಜರಿ ಬೇಡಿಕೆ
ಭಾಷಾವಾರು ಮೊದಲ ದಿನದ ಮುಂಗಡ ಬುಕಿಂಗ್ನಲ್ಲಿ ಹಿಂದಿ ಆವೃತ್ತಿ ಮುಂಚೂಣಿಯಲ್ಲಿದೆ. ಹಿಂದಿ ಆವೃತ್ತಿಯಿಂದ 25.41 ಕೋಟಿ ಮೊತ್ತದ ಟಿಕೆಟ್ಗಳು ಬುಕ್ ಆಗಿದ್ದು, ಒಟ್ಟು ಮೊದಲ ದಿನದ ಮುಂಗಡ ಬುಕಿಂಗ್ನ ಸುಮಾರು ಶೇ.78ರಷ್ಟಿದೆ.
ಕನ್ನಡ ಆವೃತ್ತಿಯು 3.62 ಕೋಟಿ ಮೊತ್ತದ ಟಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತೆಲುಗು ಆವೃತ್ತಿಯು 2.45 ಕೋಟಿ ರೂ. ಗಳಿಸಿದೆ. ತಮಿಳು ಆವೃತ್ತಿಯಿಂದ 70.57 ಲಕ್ಷ ಹಾಗೂ ಮಲಯಾಳಂ ಆವೃತ್ತಿಯಿಂದ 22.04 ಲಕ್ಷ ಮೊತ್ತದ ಟಿಕೆಟ್ಗಳು ಬುಕ್ ಆಗಿವೆ.ಇದನ್ನೂ ಓದಿ: ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಐದನೇ ದಿನ – ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಗಣ
3D ಮತ್ತು ಪ್ರೀಮಿಯಂ ಪ್ರದರ್ಶನಗಳಿಗೂ ಬೇಡಿಕೆ
ಹಿಂದಿ 3D ಆವೃತ್ತಿಯು 7,973 ಪ್ರದರ್ಶನಗಳ ಮೂಲಕ 14.47 ಕೋಟಿ ಮೊತ್ತದ ಮುಂಗಡ ಬುಕಿಂಗ್ ದಾಖಲಿಸಿದೆ. ಇದು ಮೊದಲ ದಿನದ ಒಟ್ಟು ಮುಂಗಡ ಬುಕಿಂಗ್ನ ಸುಮಾರು ಶೇ.45ರಷ್ಟಾಗಿದೆ.
ಇನ್ನು IMAX, 4DX, Dolby, ICE ಮತ್ತು EPIQ ಸೇರಿದಂತೆ ಪ್ರೀಮಿಯಂ ಸ್ವರೂಪಗಳ ಪ್ರದರ್ಶನಗಳಿಂದ 5.32 ಕೋಟಿ ಮೊತ್ತದ ಟಿಕೆಟ್ಗಳು ಬುಕ್ ಆಗಿವೆ. ಇದು ಮೊದಲ ದಿನದ ಒಟ್ಟು ಬುಕಿಂಗ್ನ ಶೇ.16ರಷ್ಟಿದೆ.
ವಿದೇಶಗಳಲ್ಲೂ ‘ರಾಮಾಯಣ’ ಹವಾ
ಸ್ಯಾಕ್ನಿಲ್ಕ್ ನವೆಂಬರ್ 2ರಂದು ಪ್ರಕಟಿಸಿದ ವರದಿಯ ಪ್ರಕಾರ, ನವೆಂಬರ್ 4ರಂದು ನಡೆಯಲಿರುವ ಪಾವತಿಸಿದ ಪೂರ್ವವೀಕ್ಷಣೆ ಪ್ರದರ್ಶನಗಳಿಗಾಗಿ ವಿದೇಶಗಳಲ್ಲಿ 51 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
ಉತ್ತರ ಅಮೆರಿಕಾದಲ್ಲಿ ನವೆಂಬರ್ 4ರಿಂದ 8ರವರೆಗಿನ ಮೊದಲ ಐದು ದಿನಗಳ ಅವಧಿಗೆ 1.40 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ. ಈ ಮುಂಗಡ ಟಿಕೆಟ್ ಮಾರಾಟದ ಆಧಾರದ ಮೇಲೆ ಉತ್ತರ ಅಮೆರಿಕಾದಲ್ಲಿ ಮೊದಲ ಐದು ದಿನಗಳಲ್ಲಿ ಸುಮಾರು 13ರಿಂದ 14 ಮಿಲಿಯನ್ ಡಾಲರ್ಗಳಿಕೆ ನಿರೀಕ್ಷಿಸಲಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದು ಸುಮಾರು 1,230 ಕೋಟಿಯಿಂದ 1,325 ಕೋಟಿ ರೂಯಷ್ಟಾಗುತ್ತದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.
ಒಟ್ಟಿನಲ್ಲಿ, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ‘ರಾಮಾಯಣ: ಭಾಗ 1’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ನಲ್ಲಿ ಏರಿಕೆ ಕಂಡುಬರುತ್ತಿದ್ದು, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: `ಗೃಹಜ್ಯೋತಿ’ಯಿಂದ 1.41 ಲಕ್ಷ ಜನ ಹೊರಕ್ಕೆ – ಉಚಿತ ವಿದ್ಯುತ್ ಸೌಲಭ್ಯ ನಿರಾಕರಣೆ?

