– ಕಾಮುಕರಿಂದ ಕಾಂಡೋಮ್, ಪಿಸ್ತೂಲ್, ಚಾಕು ವಶಕ್ಕೆ
ನವದೆಹಲಿ: ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ (Aastha Kunj Gang-Rape Case) ತನಿಖೆ ಇದೀಗ ಡಿಜಿಟಲ್ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳತ್ತ ತಿರುಗಿದೆ. ಪ್ರಕರಣದ ಮೂವರು ಆರೋಪಿಗಳಾದ ಆಸಿಫ್, ಹೇಮಂತ್ ಹಾಗೂ ಮುಖೇಶ್ ಅವರ ಮೊಬೈಲ್ ಫೋನ್‌ಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಾದ ಹೇಮಂತ್ ಮತ್ತು ಮುಖೇಶ್ ಘಟನೆಯ ಬಳಿಕ ತಮ್ಮ ಸರ್ಚ್ ಹಿಸ್ಟರಿ ಡಿಲೀಟ್ ಮಾಡಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಆದಾಗ್ಯೂ ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಚಟುವಟಿಕೆ, ಸಂವಹನ ಹಾಗೂ ಆರೋಪಿಗಳ ಓಡಾಟದ ಮಾಹಿತಿಯನ್ನ ಪತ್ತೆಹಚ್ಚಲು ತನಿಖಾಧಿಕಾರಿಗಳು ಮೂವರ ಮೊಬೈಲ್ ಫೋನ್‌ಗಳ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನ ಪರಿಶೀಲಿಸುತ್ತಿದ್ದಾರೆ.
ಊಟಕ್ಕೆ ತೆರಳಿ, ಬಳಿಕ ಬಟ್ಟೆ ವಾಶ್
ಹೇಮಂತ್ ಮತ್ತು ಮುಖೇಶ್ ಬಾಲಕಿ ಮೇಲೆ ಘೋರ ಕೃತ್ಯ ಎಸಗಿದ ಬಳಿಕ ಮೊದಲು ಒಂದು ಹೋಟೆಲ್‌ನಲ್ಲಿ ಊಟಕ್ಕೆ ತೆರಳಿದ್ದಾರೆ. ಬಳಿಕ ಶ್ರೀನಿವಾಸಪುರಿಯಲ್ಲಿರುವ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ. ಮನೆಗೆ ಮರಳಿದ ಬಳಿಕ ಅವರು ತಮ್ಮ ಬಟ್ಟೆಗಳನ್ನ ತೊಳೆದಿಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಆರೋಪಿಗಳ ಬಳಿ ಪಿಸ್ತೂಲ್, ಚಾಕು, ಕಾಂಡೋಮ್ ಪತ್ತೆ
ಘಟನೆ ಪೂರ್ವನಿಯೋಜಿತವಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸಿಫ್ ಬಳಿ ಪಿಸ್ತೂಲ್, ಚಾಕು ಹಾಗೂ ಕಾಂಡೋಮ್‌ಗಳು ಪತ್ತೆಯಾದ ಹಿನ್ನೆಲೆ, ಎಫ್‌ಐಆರ್‌ನಲ್ಲಿ ಕ್ರಿಮಿನಲ್ ಕಾನ್ಸ್‌ಪಿರಸಿ (ಅಪರಾಧ ಸಂಚು)ಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಪೊಲೀಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹಿಂದಿನ ಕೃತ್ಯಗಳ ಬಗ್ಗೆಯೂ ತನಿಖೆ
ಮತ್ತೊಂದು ಕಡೆ ಕಾಮುಕರು ಈ ಹಿಂದೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದರೇ ಎಂಬ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆಸಿಫ್ ಈ ಹಿಂದೆ ಸ್ಥಳೀಯರಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿದ್ದು, ಅವುಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸೆ.21ರಂದು ನಡೆದಿದ್ದೇನು?
ಸೆಪ್ಟೆಂಬರ್ 21ರಂದು ಮೂವರು ಆರೋಪಿಗಳು 17 ವರ್ಷದ ಬಾಲಕಿ ಹಾಗೂ ಆಕೆಯ 17 ವರ್ಷದ ಪುರುಷ ಸ್ನೇಹಿತನನ್ನು ತಾವು ಪೊಲೀಸ್ ಅಧಿಕಾರಿಗಳು ಎಂದು ಬೆದರಿಸಿದ್ದರು. ಆರೋಪಿಗಳು ಪೊಲೀಸರಂತೆ ಮಾತನಾಡುತ್ತಾ, ʻಜನಾಬ್ʼ ಎಂದು ಸಂಬೋಧಿಸಿ ಕಾನೂನು ಕ್ರಮದ ಹೆಸರಿನಲ್ಲಿ ಬೆದರಿಸಿದ್ದರು. ಬಳಿಕ ಬಾಲಕಿ ಹಾಗೂ ಆಕೆಯ ಸ್ನೇಹಿತನನ್ನು ಬೇರ್ಪಡಿಸಿದ್ದಾರೆ. ಈ ವೇಳೆ ಪಾರ್ಕ್‌ನೊಳಗೆ ಎಳೆದೊಯ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಘಟನೆಯ ಬಳಿಕ ಈ ವಿಷಯವನ್ನ ಯಾರಿಗೂ ತಿಳಿಸದಂತೆ ಬಾಲಕಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಬಾಲಕಿ ತನ್ನ ಸ್ನೇಹಿತನಿಗೆ ನಡೆದ ವಿಚಾರ ತಿಳಿಸಿದ್ದು, ಆತ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಘಟನೆ ನಡೆದ ದಿನ ಬಾಲಕಿ ತನ್ನ ಸ್ನೇಹಿತನೊಂದಿಗೆ ಕಲ್ಕಾಜಿ ದೇವಸ್ಥಾನಕ್ಕೆ ತೆರಳಿದ್ದಳು. ಬಳಿಕ ಇಬ್ಬರೂ ಆಸ್ಥಾ ಕುಂಜ್ ಪಾರ್ಕ್‌ಗೆ ತೆರಳಿದ್ದರು.


