ಹೈದರಾಬಾದ್: 18 ವರ್ಷದ ನರ್ಸಿಂಗ್ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು (Nursing Student) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ತೆಲಂಗಾಣದ (Telangana) ಜುಲುರುಪಾಡು ಮಂಡಲದ ವೆಂಗಣ್ಣಪಾಲೆಂ (Vengannapalem) ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು ಹರಿಣಿ ಎಂದು ಗುರುತಿಸಲಾಗಿದೆ. ಖಮ್ಮಂ ಪ್ರದೇಶದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಹರಿಣಿ, ರಜೆ ಹಿನ್ನೆಲೆಯಲ್ಲಿ ಇತ್ತೀಚೆಗೆ ತನ್ನ ಸ್ವಗ್ರಾಮಕ್ಕೆ ಮರಳಿದ್ದಳು. ಹರಿಣಿ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಆಕೆಯ ತಾಯಿ ರಾಜೇಶ್ವರಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿರುವ ಬಾತ್ರೂಮ್ ಹಿಂಭಾಗದಲ್ಲಿ ಹರಿಣಿ ಮೃತಪಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಾಗೂ ಸಾಕ್ಷ್ಯ ಸಂಗ್ರಹಣಾ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಜಾರ್ಖಂಡ್ ಸಚಿವೆ ಪುತ್ರಿ ಸೇರಿ ನಾಲ್ವರು ದುರ್ಮರಣ
ಹರಿಣಿಯ ತಂದೆ ಮೃತಪಟ್ಟಿದ್ದು, ತಾಯಿ ದಿನಗೂಲಿ ಕೆಲಸ ಮಾಡಿಕೊಂಡು ಇಬ್ಬರು ಹೆಣ್ಣುಮಕ್ಕಳನ್ನು ಸಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಗಳ ಸಾವಿನ ಹಿಂದೆ ಪಕ್ಕದ ಮನೆಯ ವ್ಯಕ್ತಿಯೊಬ್ಬನ ಕೈವಾಡವಿರಬಹುದು ಎಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಡೆದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಕತ್ತು ಹಿಸುಕಿ ಸಾವಿಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ: ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ
ಕೊತ್ತಗುಡೆಂ ಡಿಎಸ್ಪಿ ಎಲ್. ಆದಿನಾರಾಯಣ ಮಾತನಾಡಿ, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಪ್ರಕರಣವನ್ನು ಅನುಮಾನಾಸ್ಪದ ಸಾವು ಪ್ರಕರಣದಿಂದ ಕೊಲೆ ಪ್ರಕರಣವಾಗಿ ಬದಲಿಸಲಾಗುವುದು ಎಂದು ತಿಳಿಸಿದ್ದಾರೆ. ಹರಿಣಿ ಕತ್ತು ಹಿಸುಕಿದ ಪರಿಣಾಮ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬಿಎನ್ಎಸ್ನ ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಿಸಲಾಗುವುದು. ಪ್ರಮುಖ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಲೀಪರ್ ಬಸ್ ದುರಂತದಲ್ಲಿ 9 ಮಂದಿ ಸಜೀವ ದಹನ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ
ಪ್ರಕರಣದಲ್ಲಿ ಕೆಲವು ಶಂಕಿತರನ್ನು ಪೊಲೀಸರು ಗುರುತಿಸಿದ್ದು, ಅವರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ಪ್ರಮುಖ ಶಂಕಿತನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಹರಿಣಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವಿವರವಾದ ವಿಧಿವಿಜ್ಞಾನ ಮತ್ತು ವೈದ್ಯಕೀಯ ವರದಿಗಳಿಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿ.ಟೆಕ್ ಅರ್ಧಕ್ಕೆ ನಿಲ್ಲಿಸಿ ಕಳ್ಳತನ ವೃತ್ತಿ, ಬಾಂಗ್ಲಾದಲ್ಲಿ ಪೌರತ್ವ, – ಬೆಂಗಳೂರಿಗೆ ಕಾಲಿಟ್ಟು ಪೊಲೀಸ್ ಅತಿಥಿಯಾದ ಹೈಫೈ ಖದೀಮ!
ಹರಿಣಿಗೆ ಪರಿಚಯವಿದ್ದವರು, ಆಕೆಯೊಂದಿಗೆ ಸಂಪರ್ಕದಲ್ಲಿದ್ದವರು ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೂ ಮುನ್ನ ಹರಿಣಿಯ ಚಲನವಲನಗಳು ಹಾಗೂ ಘಟನೆ ಬಳಿಕ ಶಂಕಿತರ ಚಲನವಲನಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ – CWMA ಆದೇಶ ಪಾಲಿಸಲು ಸುಪ್ರೀಂ ಸೂಚನೆ; ಅ.12ಕ್ಕೆ ವಿಚಾರಣೆ ಮುಂದೂಡಿಕೆ

