– ಸೆಲೂನ್ ಯುವತಿಯೊಂದಿಗೆ ಪ್ರೀತಿ, ಮದ್ವೆಯಾಗಿ ಬಾಂಗ್ಲಾಕ್ಕೆ ಪರಾರಿಯಾಗಿದ್ದ ವಿನೋದ್
ಬೆಂಗಳೂರು: 30ಕ್ಕೂ ಅಧಿಕ ಮನೆಗಳ್ಳತನ ಕೃತ್ಯದ ಆರೋಪಿಯಾಗಿರುವ ಕುಖ್ಯಾತ ಅಂತರರಾಜ್ಯ ಕಳ್ಳನನ್ನ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ನೇನಾವತ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಬಷರ್ ನೂರ್ ಮೊಹಮ್ಮದ್ (38) ಬಂಧಿತ ಆರೋಪಿ. ಇತ್ತೀಚೆಗೆ ವಿಲ್ಸನ್ ಗಾರ್ಡನ್‌ನ 10ನೇ ಕ್ರಾಸ್‌ನಲ್ಲಿರುವ ವೃದ್ಧ ದಂಪತಿಯ ಮನೆಗೆ ಯಾರೂ ಇಲ್ಲದ ವೇಳೆ ಅಕ್ರಮವಾಗಿ ನುಗ್ಗಿದ್ದ ಈ ಕಳ್ಳ, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ವಿಲ್ಸನ್ ಗಾರ್ಡನ್ ಠಾಣಾ ಇನ್ಸ್‌ಪೆಕ್ಟರ್ ಪ್ರಕಾಶ್.ಕೆ ಅವರ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿದೆ. ಬಂಧಿತನಿಂದ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ 271 ಗ್ರಾಂ ತೂಕದ ಚಿನ್ನಾಭರಣಗಳು, ವಿದೇಶಿ ಹಣವನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

30ಕ್ಕೂ ಹೆಚ್ಚು ಕೇಸ್‌ಗಳಲ್ಲಿ ವಾಂಟೆಡ್
ಬಂಧಿತ ಆರೋಪಿ ನೇನಾವತ್ ವಿನೋದ್ ಕುಮಾರ್ ಸಾಮಾನ್ಯ ಕಳ್ಳನಲ್ಲ. ಈತನ ವಿರುದ್ಧ ಹೈದರಾಬಾದ್, ಆಂಧ್ರಪ್ರದೇಶ, ಉತ್ತರಪ್ರದೇಶ ಸೇರಿದಂತೆ ದೇಶದಾದ್ಯಂತ 30ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಬಿ.ಟೆಕ್ ವ್ಯಾಸಾಂಗ ಮಾಡುತ್ತಿದ್ದಾಗಲೇ ಕಳ್ಳತನ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ ಈತ ಒಂದು ವರ್ಷ ಶಿಕ್ಷೆ ಅನುಭವಿಸಿದ್ದ. ನಂತರ ಕಾಲೇಜು ಡ್ರಾಪೌಟ್ ಆಗಿದ್ದ ಈತನಿಗೆ ಹೈದರಾಬಾದ್‌ನ ಸಲೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಮೂಲದ ಯುವತಿಯ ಪರಿಚಯವಾಗಿತ್ತು. ಆಕೆಯನ್ನ ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಕುಮಾರ್ ನಂತರ ಆಕೆಯೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿ 9 ವರ್ಷ ಅಲ್ಲಿಯೇ ವಾಸವಿದ್ದ. ಬಳಿಕ ಅಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದು, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯಲ್ಲಿ ಕೆಲಕಾಲ ಅಡುಗೆ ಕೆಲಸ ಮಾಡಿಕೊಂಡಿದ್ದ. ನಕಲಿ ದಾಖಲೆಗಳನ್ನ ಬಳಸಿ ನೇಪಾಳ ಗಡಿಯ ಮೂಲಕ ಭಾರತಕ್ಕೆ ಮರಳಿದ್ದ ಆರೋಪಿ ಪುನಃ ಕಳ್ಳತನದಲ್ಲಿ ಭಾಗಿಯಾಗಲಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ನಗರದಿಂದ ಮತ್ತೊಂದು ನಗರಕ್ಕೆ ಫ್ಲೈಟ್ ಮೂಲಕವೇ ಪ್ರಯಾಣಿಸುತ್ತಿದ್ದ ಈತ, ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದು ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ. ಕೃತ್ಯದ ಬಳಿಕ ದೆಹಲಿಗೆ ತೆರಳಿದ್ದ ಆರೋಪಿ ತನ್ನ ಪತ್ನಿಯನ್ನ ಭೇಟಿಯಾಗಿ ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೇ ಆರೋಪಿಯನ್ನ ಬಂಧಿಸಲಾಯಿತು. ಸದ್ಯ ಮತ್ತಷ್ಟು ಮಹತ್ವದ ಮಾಹಿತಿಗಳನ್ನ ಕಲೆಹಾಕಲಾಗುತ್ತಿದ್ದು, ಈ ಕುಖ್ಯಾತ ಅಂತರರಾಜ್ಯ ಕಳ್ಳನ ಕುರಿತು ಎಲ್ಲಾ ರಾಜ್ಯಗಳ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

