ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವಾಕಾಂಕ್ಷೆಯ ‘ರಾಮಾಯಣ Part -1’ (Ramayana Part 1) ಸಿನಿಮಾವನ್ನ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲೂ ಗ್ರ್ಯಾಂಡ್ ರಿಲೀಸ್‌ಗೆ ಭರ್ಜರಿ ಸಿದ್ಧತೆ ನಡೆದಿದೆ. ಆದ್ರೆ ಭಾರತದಲ್ಲಿ (India) ಹಿಂದಿ ಸೇರಿದಂತೆ ಇತರ ದೇಶಿಯ ಭಾಷೆಗಳಲ್ಲಿ ಸ್ವದೇಶಿಗರು ನೋಡುವ ಆವೃತ್ತಿಯೇ ವಿದೇಶಿ ಪ್ರೇಕ್ಷಕರಿಗೂ ಲಭ್ಯವಾಗುವುದಿಲ್ಲ ಎನ್ನಲಾಗಿದೆ.
‘ರಾಮಾಯಣ’ ಚಿತ್ರದ ಇಂಗ್ಲಿಷ್ ಆವೃತ್ತಿಯು ಹಿಂದಿ ಆವೃತ್ತಿಗಿಂತ ಸುಮಾರು 30 ನಿಮಿಷಗಳಷ್ಟು ಚಿಕ್ಕದಾಗಿರಲಿದೆ ಎನ್ನಲಾಗಿದೆ. ವಿದೇಶಿ ಪ್ರೇಕ್ಷಕರಿಗಾಗಿ ಸಿದ್ಧಪಡಿಸಲಾಗುತ್ತಿರುವ ಈ ಆವೃತ್ತಿಯಲ್ಲಿ ಕೆಲವು ದೃಶ್ಯಗಳನ್ನ ಕತ್ತರಿಸಿ, ಚಿತ್ರದ ಒಟ್ಟು ಅವಧಿಯನ್ನ ಕಡಿಮೆ ಮಾಡುವ ಸಾಧ್ಯತೆ ಇದೆ. ಇದಲ್ಲದೆ, ಇಂಗ್ಲಿಷ್ ಆವೃತ್ತಿಯಲ್ಲಿ ಯಾವುದೇ ಹಾಡುಗಳೂ ಇರುವುದಿಲ್ಲ ಎಂದು ವರದಿಯಾಗಿದೆ.

ಹೌದು. ಜಾಗತಿಕ ಪ್ರೇಕ್ಷಕರಿಗೆ ಭಾರತೀಯ ಮಹಾಕಾವ್ಯವನ್ನ ಅವರ ಸಿನಿಮಾ (Cinema) ವೀಕ್ಷಣಾ ಶೈಲಿಗೆ ಹೊಂದುವ ರೀತಿಯಲ್ಲಿ ತಲುಪಿಸುವ ಉದ್ದೇಶದಿಂದ ನಿರ್ಮಾಪಕರು ಈ ರೀತಿಯ ಬದಲಾವಣೆಗಳನ್ನ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
30 ನಿಮಿಷದ ಸಿನಿಮಾಗೆ ಕತ್ತರಿ ಏಕೆ?
ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅಭಿರುಚಿ ಬೇರೆ ಬೇರೆಯಾಗಿದೆ ಎಂಬುದನ್ನ ನಿರ್ಮಾಪಕರು ಗಮನಿಸಿದ್ದಾರೆ. ಭಾರತೀಯ ಸಿನಿಮಾಗಳಲ್ಲಿ ದೀರ್ಘ ಅವಧಿಯ ಚಿತ್ರಗಳು ಸಾಮಾನ್ಯವಾಗಿದ್ದು, ಅದರಲ್ಲೂ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಹಾಡುಗಳು ಹಾಗೂ ಸಂಗೀತದ ದೃಶ್ಯಗಳು ಪ್ರಮುಖ ಭಾಗವಾಗಿರುತ್ತವೆ. ಆದರೆ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನ ಗಮನದಲ್ಲಿಟ್ಟುಕೊಂಡು ಚಿತ್ರದ ನಿರೂಪಣೆಯನ್ನ ಇನ್ನಷ್ಟು ವೇಗವಾಗಿ ಮತ್ತು ಸಂಕ್ಷಿಪ್ತವಾಗಿ ಇರಿಸಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಹೀಗಾಗಿ ಹಿಂದಿ ಆವೃತ್ತಿಯಲ್ಲಿರುವ ಕೆಲವು ಭಾಗಗಳನ್ನ ಇಂಗ್ಲಿಷ್ ಆವೃತ್ತಿಯಲ್ಲಿ ಕಡಿಮೆ ಮಾಡಲಾಗುತ್ತದೆ. ಜೊತೆಗೆ ಹಾಡುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ, ‘ರಾಮಾಯಣ’ ಚಿತ್ರವನ್ನು ಬೇರೆ ಬೇರೆ ದೇಶಗಳಲ್ಲಿ ವೀಕ್ಷಿಸುವ ಪ್ರೇಕ್ಷಕರಿಗೆ ಒಂದೇ ಕಥೆಯ ವಿಭಿನ್ನ ಅನುಭವ ಸಿಗಬಹುದು. ಚಿತ್ರದ ಮೂಲ ಕಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಕಥೆಯನ್ನು ಪ್ರಸ್ತುತಪಡಿಸುವ ವೇಗ ಮತ್ತು ಶೈಲಿಯಲ್ಲಿ ವ್ಯತ್ಯಾಸ ಇರಲಿದೆ ಎಂದು ವರದಿಗಳು ತಿಳಿಸಿವೆ.
ಒಟ್ಟಿನಲ್ಲಿ, ‘ರಾಮಾಯಣ’ ಚಿತ್ರದ ವಿವಿಧ ಆವೃತ್ತಿಗಳಲ್ಲಿನ ಈ ವ್ಯತ್ಯಾಸವು ಚಿತ್ರದ ದೊಡ್ಡ ಮಟ್ಟದ ನಿರ್ಮಾಣವನ್ನ ಮತ್ತೊಮ್ಮೆ ತೋರಿಸುತ್ತದೆ.

