– ಕಳೆದ ವರ್ಷದ ಗಣೇಶ ಗಲಾಟೆಗೆ ದೋಸ್ತಿ ಕೌಂಟರ್
ಮಂಡ್ಯ: ಕಳೆದ ವರ್ಷ ಗಣೇಶೋತ್ಸವದ ವೇಳೆ ಕಲ್ಲು ತೂರಾಟದಿಂದ ಹೊತ್ತಿ ಉರಿದಿದ್ದ ಸಕ್ಕರೆ ನಾಡು ಮದ್ದೂರಿನಲ್ಲಿಂದು (Maddur) ಕೇಸರಿ ಪಡೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಳೆದ ಬಾರಿಯ ಘಟನೆಯನ್ನೇ ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಡೆ, ಇಂದು ಒಂದಲ್ಲ, ಎರಡಲ್ಲ, ಬರೋಬ್ಬರಿ 108 ಗಣೇಶ ಮೂರ್ತಿಗಳ ಭವ್ಯ ಸಾಮೂಹಿಕ ಮೆರವಣಿಗೆಗೆ ಕರೆ ಕೊಟ್ಟಿದೆ.
ಕಳೆದ ವರ್ಷ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ (Mass Ganesha Immersion Procession) ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಶಾಂತಿ ಸುವ್ಯವಸ್ಥೆ ಕೆಟ್ಟು, ರಾಜಕೀಯ ಕೆಸರೆರಚಾಟಕ್ಕೂ ಈ ಘಟನೆ ಸಾಕ್ಷಿಯಾಗಿತ್ತು. ಆದರೆ ಈ ಬಾರಿ ದೋಸ್ತಿ ನಾಯಕರು ಆ ಘಟನೆಯನ್ನೇ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಮದ್ದೂರಿನ ಹಲವೆಡೆ ಪ್ರತಿಷ್ಠಾಪಿಸಲಾಗಿದ್ದ ವಿಘ್ನವಿನಾಶಕನ ಮೂರ್ತಿಗಳನ್ನು ಒಗ್ಗೂಡಿಸಿ, 108 ಗಣೇಶಗಳ ಬೃಹತ್ ಬೀಳ್ಕೊಡುಗೆ ರ್ಯಾಲಿ ನಡೆಸಲು ಮೈತ್ರಿ ನಾಯಕರು ವೇದಿಕೆ ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ
ಕಳೆದ ಬಾರಿ ವಿವಾದಕ್ಕೆ ಕಾರಣವಾಗಿದ್ದ ಅದೇ ಸೂಕ್ಷ್ಮ ಪ್ರದೇಶ, ಅಂದರೆ ಪೇಟೆ ಬೀದಿಯ ಮಸೀದಿ ಪಕ್ಕದಲ್ಲೇ ಈ ಸಾಮೂಹಿಕ ರ್ಯಾಲಿ ಸಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದ್ದು, ಸೂಕ್ಷ್ಮ ವಲಯಗಳಲ್ಲಿ ಸಿಆರ್ಪಿಎಫ್, ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮೊದಲ ಪೈಲಟ್ ಆದ ಸಂಗೀತಾ
ಇನ್ನು ಈ ಸಾಮೂಹಿಕ ವಿಸರ್ಜನಾ ಮಹೋತ್ಸವ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ. ಬದಲಿಗೆ ಮುಂಬರುವ ದಿನಗಳಲ್ಲಿ ಮೈತ್ರಿ ಬಲ ಪ್ರದರ್ಶಿಸುವ ರಾಜಕೀಯ ಅಖಾಡವೂ ಆಗಿದೆ. ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಮುಖಂಡರು ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಇಡೀ ಪಟ್ಟಣದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ಕಾರ್ಯಕರ್ತರು ಸೇರುವ ನಿರೀಕ್ಷೆಯಿದ್ದು, ಮದ್ದೂರಿನಲ್ಲಿ ಕೇಸರಿ ಅಲೆ ಎದ್ದಿದೆ. ಇದನ್ನೂ ಓದಿ: ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗಿದ್ದು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗ್ತಿದೆ: ಪರಮೇಶ್ವರ್
ಒಟ್ಟಾರೆ ಕಳೆದ ವರ್ಷದ ಕಲ್ಲು ತೂರಾಟಕ್ಕೆ ಈ 108 ಗಣೇಶಗಳ ಸಾಮೂಹಿಕ ಮೆರವಣಿಗೆ ಮೂಲಕ ದೋಸ್ತಿಗಳು ನೇರ ಕೌಂಟರ್ ಕೊಟ್ಟಂತಾಗಿದೆ. ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ಮೆರವಣಿಗೆ ಮುಗಿಯುತ್ತಾ? ಖಾಕಿ ಪಡೆ ಯಾವ ರೀತಿ ಪರಿಸ್ಥಿತಿ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆ; ದೊಮ್ಮಲೂರಿನಲ್ಲಿ ಗೋಡೆ ಕುಸಿದು 4 ಹಸು, 1 ಕರು ಸಾವು


