ನೆನಪುಗಳ ಮಾತು ಮಧುರ! ಕವಿವಾಣಿ ಎಷ್ಟು ಸತ್ಯ ಅಲ್ವಾ? ಕೆಲವು ನೆನಪುಗಳು (Old Memories) ಸಿಹಿಯಾಗಿದ್ದು, ಇನ್ನು ಕೆಲವು ಕಹಿಯಾದದ್ದು. ಕೆಲವು ನೆನಪುಗಳು ಮನದ ಪಾಕೆಟ್ನಲ್ಲಿದ್ರೆ, ಇನ್ನೂ ಕೆಲವು, ಪುಸ್ತಕದ ಪುಟಗಳ ನಡುವೆ. ಹಳೆಯ ಪೆಟ್ಟಿಗೆಯ ಒಳಗೆ ಅಥವಾ ಅದ್ಯಾವುದೋ ದಿಬ್ಬದ ಮೇಲೋ? ಮರದ ಕೆಳಗೋ ನಿಂತು ಮಾತಾಡಿದ ಜಾಗದಲ್ಲೋ ಹೀಗೆ ಅಲ್ಲೆಲ್ಲ ಗುಪ್ತವಾಗಿ ನೆನಪುಗಳು ಜೀವಂತವಾಗಿರುತ್ತವೆ. ಅಂತಹ ನೆನಪುಗಳನ್ನು ಜೀವಂತವಾಗಿರಿಸಿಕೊಂಡ ವಸ್ತುಗಳು, ಸ್ಥಳಗಳು ಎಲ್ಲರ ಜೀವನದಲ್ಲೂ ಇದ್ದೇ ಇರುತ್ತವೆ.
ಅಜ್ಜನ ಕೈಗಡಿಯಾರ!
ಮನೆಯ ಅಟ್ಟದ ಮೂಲೆಯಲ್ಲೊಂದು ಹಳೆಯ ಪೆಟ್ಟಿಗೆ. ಅದರ ಮೇಲೆ ಧೂಳಿನ ಪದರ! ಯಾರೂ ಮುಟ್ಟದೆ, ಯಾರಿಗೂ ಬೇಡವೆನಿಸಿದಂತೆ ವರ್ಷಗಳಿಂದ ಹಾಗೆಯೇ ಬಿದ್ದಿದೆ. ಆ ಪೆಟ್ಟಿಗೆಯೊಳಗೆ ಕೈ ಹಾಕಿ ನೋಡಿದರೆ… ಅದು ಕೇವಲ ವಸ್ತುಗಳನ್ನಲ್ಲ, ಒಂದು ಕಾಲವನ್ನೇ ಜೋಪಾನವಾಗಿ ಕಾಪಾಡಿಕೊಂಡಿರುವ ವಸ್ತು. ಅದೇನೆಂದರೆ ಅಜ್ಜನ ವಾಚ್!
ಅದರ ಮುಳ್ಳುಗಳು ನಡೆಯದೆ ನಿಂತುಹೋಗಿವೆ. ಅದರೊಂದಿಗೆ ಕಳೆದ ದಿನಗಳು ನಿಂತಿಲ್ಲ. ಅಜ್ಜ ಇವತ್ತು ಇಲ್ಲ. ಆದರೆ ಆ ವಾಚ್ನ್ನು ನೋಡಿದಾಗ ಅಜ್ಜ ಆ ವಾಚ್ ಕಟ್ಟಿಕೊಂಡು ಅದೆಷ್ಟು ಗತ್ತಲ್ಲಿ ನಡೆಯುತ್ತಿದ್ರು! ದಿನಕ್ಕೊಮ್ಮೆ ಬೆಳಗ್ಗೆ ಅದಕ್ಕೆ ಕೀ ಕೊಡ್ತಿದ್ರು! ಆದ್ರೆ ಆ ವಾಚ್ ಇವತ್ತಿಗೂ ಹಾಗೇ ಇದೆ. ಅಜ್ಜನ ನೆನಪುಗಳನ್ನು ತನ್ನೊಳಗೆ ಸುತ್ತುತ್ತಾ!
ಮೂಲೆಯಲ್ಲಿ ಮೌನವಾಗಿ ಕೂತ ರೇಡಿಯೋ
ಮತ್ತೊಂದು ಮೂಲೆಯಲ್ಲಿ ಮೌನವಾಗಿ ಕುಳಿತ ಹಳೆಯ (Radio) ರೇಡಿಯೋ. ಒಂದು ಕಾಲದಲ್ಲಿ ಭೀಮಸೇನ್ ಜೋಷಿ, ಎಮ್.ಎಸ್ ಸುಬ್ಬಲಕ್ಷ್ಮಿಯವರ ಕಂಠ ಸಿರಿಯಿಂದ ಹಿಡಿದು ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಭಾಷಣ, ಇಂಡಿಯಾ – ಪಾಕಿಸ್ತಾನ ಮ್ಯಾಚ್ನ್ನು ಮನೆ ಮಂದಿಗೆ ಕೇಳಿಸಿತ್ತು. ಆದ್ರೆ ಇವತ್ತು ಅದು ಮೌನವಾಗಿ ಕುಳಿತಿದೆ.

ಈಗ ಮೊಬೈಲ್ನಲ್ಲಿ ಹಾಡುಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಆ ರೇಡಿಯೋದಿಂದ ಕೇಳಿಬರುತ್ತಿದ್ದ ಹಾಡಿಗಾಗಿ ಇಡೀ ಕುಟುಂಬ ಒಂದೆಡೆ ಕುಳಿತು ಕಾಯುತ್ತಿದ್ದ ದಿನಗಳ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಈಗಲೂ ಎಷ್ಟೋ ಜನ ರೇಡಿಯೋ ಕೇಳಿದ್ದರೆ ನಿಮಗೂ ಇದೇ ರೀತಿಯ ನೆನಪು ಮರುಕಳಿಸಬಹುದು?
ಬ್ಲಾಕ್ & ವೈಟ್ ಫೋಟೋ
ಹಳೆಯ ಕಪ್ಪು-ಬಿಳುಪು ಫೋಟೋವೊಂದು (Black And White Photo) ಸಿಕ್ಕಾಗಲಂತೂ ಮನಸ್ಸು ಇನ್ನಷ್ಟು ಹಿಂದಕ್ಕೆ ಓಡುತ್ತದೆ. ಚಿತ್ರದಲ್ಲಿರುವ ಕೆಲವರು ಇಂದು ನಮ್ಮ ನಡುವೆ ಇಲ್ಲ. ಅವರ ಮುಖಗಳು ಮಾತ್ರ ಆ ಫೋಟೋದಲ್ಲಿ ಇನ್ನೂ ನಗುತ್ತಿವೆ. ಕಾಲ ಅವರನ್ನೆಲ್ಲ ನಮ್ಮಿಂದ ದೂರ ಮಾಡಿದ್ದರೂ, ಆ ಫೋಟೋ ಮಾತ್ರ ಅವರ ನಗುವನ್ನು ಹಾಗೆಯೇ ಉಳಿಸಿಕೊಂಡಿದೆ!
ಹಳೆಯ ಪತ್ರಗಳು
ಬೀರುವಿನಲ್ಲಿರುವ ಹಳೆಯ ಪತ್ರಗಳು, ಅಪ್ಪನಿಗೆ ಸ್ನೇಹಿತರು (Friends) ಬರೆದಿದ್ದು, ಅಜ್ಜ ಅಪ್ಪನಿಗೆ ಬರೆದಿದ್ದು, ಮದುವೆಗೂ ಮುಂಚೆ ಬಂದ ಪ್ರೇಮಪತ್ರ! ಹೀಗೆ ಯಾರಿಗೋ ಯಾರೋ ಬರೆದ ಸಾಲುಗಳು. ಆ ಕಾಗದ ಮಸುಕಾಗಿದ್ದರೂ, ಅದರಲ್ಲಿನ ನೆನಪು, ಇನ್ನೂ ಹಾಗೇ ಉಳಿದಿರುತ್ತವೆ. ಅದನ್ನ ಆಗಾಗ ಓದಿ ಸಂತಸ ಪಡುವ ಕೆಲವು ಜೀವಗಳು ಇರುತ್ತವೆ. ಹೀಗಿದ್ದ ಕಾಲ ಹೀಗಾಯ್ತಲ್ಲ ಎಂದು ಮರಗುವ ಜೀವಗಳು ಇರುತ್ತವೆ!

ಲಕ್ಕಿ ಪೆನ್!
ನಾನು ಚಿಕ್ಕವನಾಗಿದ್ದಾಗ ಅಪ್ಪ (Father) ಕೊಡಿಸಿದ ಇಂಕ್ ಪೆನ್, ಅದೇ ಪೆನ್ನಲ್ಲಿ ನಾನು ಮೊದಲು ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದಿದ್ದು. ಮೊದಲ ಕವನ ಬರೆದಿದ್ದು, ಆ ಕವನ ಒಂದು ಮ್ಯಾಗಜಿನ್ನಲ್ಲೂ ಪ್ರಕಟವಾಗಿತ್ತು. ಅದೇ ಪೆನ್ನಲ್ಲೇ ನನ್ನ ಪ್ರೇಯಸಿಗೆ (Lover) ಮೊದಲ ಪ್ರೇಮ ಪತ್ರ (Love Letter) ಬರೆದಿದ್ದೆ. ಇಂತಹ ಒಂದಾದರೂ ನೆನಪುಗಳು ನಿಮ್ಮಲ್ಲಿಯೂ ಇರಬಹುದಲ್ಲವೇ?

ಗೆಳತಿ ಕೊಟ್ಟ ಚಾಕ್ಲೇಟ್!
ಅವತ್ತು ಅವಳು ಕೊಟ್ಟ ಚಾಕ್ಲೇಟ್ ತಿಂದಾಗಿದೆ. ಆದ್ರೆ ಪುಸ್ತಕದ ಪುಟಗಳ ನಡುವೆ ಅವಳು ಕೊಟ್ಟ ಚಾಕ್ಲೇಟ್ನ ಕವರ್ ಹಾಗೇ ಇದೆ. ನನಗಿನ್ನೂ ನೆನಪಿದೆ ಈ ಚಾಕ್ಲೇಟ್ ಕೊಟ್ಟು ಸುಮಾರು 11 ವರ್ಷ ಆಯ್ತು. ಅವತ್ತು ಅವಳು ಹಳದಿ ಬಳೆ ಹಾಕಿದ್ಲು! ಪರ್ಪಲ್ ಕಲ್ಲರ್ ಡ್ರೆಸ್ ಹಾಕೊಂಡಿದ್ಲು..! ಅವಳು ಕೊಡ್ಬೇಕಾದ್ರೆ ʻಏಯ್ ಚಾಕ್ಲೇಟ್ ತಗಳೋ ಗೂಬೆ ʼ ಅಂದಿದ್ಲು! ಆ ಕವರ್ ನೋಡಿದಾಗ ಇದೆಲ್ಲ ನೆನಪಾಗುತ್ತೆ.
ಮೊದಲ ಸಂಬಳದಲ್ಲಿ ಕೊಂಡ ಪುಸ್ತಕ
ಓದು ಮುಗಿಸಿ ಎಲ್ಲೋ ಕೆಲಸಕ್ಕೆ ಸೇರಿ, ಮೊದಲ ಸಂಬಳದಲ್ಲಿ ಕೊಂಡ ಮೆಚ್ಚಿನ ಪುಸ್ತಕಕ್ಕೆ ತನ್ನದೇ ಆದ ಕತೆ ಇರುತ್ತದೆ. ಅದರಲ್ಲಿ ನೂರಾರು ನೆನಪುಗಳಿರುತ್ತವೆ. ಎಷ್ಟೋ ಸಲ ಆ ಪುಸ್ತಕ ಕೊಳ್ಳಬೇಕು ಎಂದು ಸೋತ ಕತೆಯೂ ಅದರಲ್ಲಿ ಸೇರಿರುತ್ತದೆ. ಪುಸ್ತಕ ಅಂತ ಅಲ್ಲ, ಇಂತಹ ಯಾವ ವಸ್ತುವಾದ್ರೂ ಅಲ್ಲಿರಬಹುದು ಅಲ್ವಾ?

ಮತ್ತೆ ಮತ್ತೆ ನೆನಪು
ನಾವು ಮರೆತಿರುವ ಅನೇಕ ಸಂಗತಿಗಳನ್ನು ಹೀಗೆ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ವಸ್ತುಗಳು ಮರೆತಿಲ್ಲ. ನಾವು ದೊಡ್ಡವರಾಗಿದ್ದೇವೆ, ಬದುಕು ಬದಲಾಗಿದೆ, ಮನೆ ಬದಲಾಗಿದೆ, ಸಂಬಂಧಗಳ ಸ್ವರೂಪ ಬದಲಾಗಿದೆ. ಆದರೆ ಆ ಹಳೆಯ ವಸ್ತುಗಳು ಮಾತ್ರ ನಮ್ಮ ಅಮೂಲ್ಯ ದಿನಗಳ ನೆನಪನ್ನು ಹಾಗೆಯೇ ಹಿಡಿದುಕೊಂಡಿವೆ.
ಕಾಲ ಕಳೆದುಹೋಗಬಹುದು, ಆದರೆ ನೆನಪುಗಳು ಎಂದಿಗೂ ಹಳೆಯವಾಗುವುದಿಲ್ಲ.

