ಮಂಡ್ಯ: ತಮಿಳುನಾಡಿಗೆ ಕೆಆರ್‌ಎಸ್‌ನಿಂದ (KRS) ಹರಿಯುತ್ತಿರುವ ನೀರಿನ ಪ್ರಮಾಣದ ಕುರಿತು ಸರ್ಕಾರ ಹಾಗೂ ಸಚಿವರ ಹೇಳಿಕೆಗಳು ಹೇಗೆ ವಾಸ್ತವದಿಂದ ದೂರವಿವೆ ಎಂಬುದನ್ನು ʻಪಬ್ಲಿಕ್ ಟಿವಿʼ (PUBLiC Tv) ರಿಯಾಲಿಟಿ ಚೆಕ್ ಮೂಲಕ ಹೊರಹಾಕಿದೆ.
ಮಂಡ್ಯದ (Mandya) ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಸ್ನಾನ ಘಟ್ಟದ ಬಳಿ ನಡೆಸಲಾದ ಈ ರಿಯಾಲಿಟಿ ಚೆಕ್‌ನಲ್ಲಿ ಬೃಹತ್ ಪ್ರಮಾಣದ ನೀರು ಹರಿದು ಹೋಗುತ್ತಿರುವುದು ಸ್ಪಷ್ಟವಾಗಿದೆ. ಇತ್ತ ಸಚಿವ ಚಲುವರಾಯಸ್ವಾಮಿ ಅವರು ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ನೀರು (Cauvery Water) ಹೋಗುತ್ತಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣ 8 ಸಾವಿರ ಕ್ಯೂಸೆಕ್‌ಗಳಿಗಿಂತ ಬಹಳ ಹೆಚ್ಚಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವರದಿಯ ಪ್ರಕಾರ ತಮಿಳುನಾಡಿಗೆ ಹೋಗುತ್ತಿರುವುದು 8 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಎಂಬುದು ದೃಢಪಟ್ಟಿದೆ.
ಈ ಬಗ್ಗೆ ರೈತ ಮುಖಂಡ ನಂಜುಂಡೇಗೌಡ ತೀವ್ರವಾಗಿ ಕಿಡಿಕಾರಿದ್ದು, ಸರ್ಕಾರ ಜನರ ಕಣ್ಣಿಗೆ ಮಣ್ಣೆ ಎರಚುತ್ತಿದೆ. ನದಿಯಲ್ಲಿ ಹರಿದು ಹೋಗುತ್ತಿರುವುದು ಎಂಟು ಸಾವಿರ ಕ್ಯೂಸೆಕ್ ಅಲ್ಲ, ಹತ್ತು ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಎಂದು ನೇರ ಆರೋಪ ಮಾಡಿದ್ದಾರೆ. ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವ ಈ ಕಳ್ಳಾಟದ ರಾಜಕಾರಣದ ಅಸಲಿ ಮುಖ ಈಗ ಕಾವೇರಿ ನದಿ ತೀರದಲ್ಲೇ ಬಯಲಾಗಿದೆ.

