ನವದೆಹಲಿ: ಭಾರತದ ಆತಿಥ್ಯದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ. ನಿನ್ನೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರ ದ್ವಿಪಕ್ಷೀಯ ಮಾತುಕತೆಗಳು ಹಾಗೂ ಪೂರ್ವಭಾವಿ ಕಾರ್ಯಕ್ರಮಗಳು ನಡೆದಿದ್ದರೆ, ಇಂದಿನಿಂದ ಬ್ರಿಕ್ಸ್ ನಾಯಕರ ಅಧಿಕೃತ ಶೃಂಗಸಭೆ ಆರಂಭವಾಗಲಿದೆ. ಈ ನಡುವೆ ಹಲವು ಜಾಗತಿಕ ನಾಯಕರ ಜೊತೆಗೆ ಪ್ರಧಾನಿ ಮೋದಿ ದ್ವಿ ಪಕ್ಷೀಯ ಮಾತುಕತೆ ನಡೆಸಲಿದ್ದು ಚೀನಾ ಅಧ್ಯಕ್ಷರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ಇಂದು ಬ್ರಿಕ್ಸ್ ಶೃಂಗಸಭೆಗೆ ಅಧಿಕೃತ ಚಾಲನೆ ಸಿಗಲಿದೆ. ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಜಾಗತಿಕ ಆಡಳಿತ, ಬಹುಪಕ್ಷೀಯತೆ, ವ್ಯಾಪಾರ–ಹೂಡಿಕೆ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ, ತಂತ್ರಜ್ಞಾನ, ವಿಪತ್ತು ನಿರ್ವಹಣೆ ಹಾಗೂ ಜಾಗತಿಕ ಸರಬರಾಜು ಸರಪಳಿ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ.
Business forum, bilateral meetings and more…all the action from Bharat Mandapam today. pic.twitter.com/vUhQZqTMBF
— Narendra Modi (@narendramodi) September 11, 2026
ಇಂದು ಮೊದಲು ಸಮಗ್ರ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆ ಬಲಪಡಿಸುವುದು ಎಂಬ ವಿಷಯದ ಮೇಲೆ ಸದಸ್ಯ ರಾಷ್ಟ್ರಗಳ ನಾಯಕರ ಕ್ಲೋಸ್ ಡೋರ್ ಮೀಟಿಂಗ್ ನಡೆಸಲಿದ್ದಾರೆ. ನಂತರ ಭಾರತ ಆಯೋಜಿಸಿರುವ ಇಂಡಿಯಾ ಇನೋವೇಟ್ಸ್ ಪ್ರದರ್ಶನಕ್ಕೆ ನಾಯಕರು ಭೇಟಿ ನೀಡಲಿದ್ದಾರೆ. ಬಳಿಕ ʻಭಾರತ ಮಂಟಪಂʼನಲ್ಲಿ ನಾಯಕರ ಅಧಿಕೃತ ಗ್ರೂಪ್ ಫೋಟೋ, ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸುವ ಗಾಲಾ ಡಿನ್ನರ್ ಜಾಗತಿಕ ನಾಯಕರು ಭಾಗಿಯಾಗಲಿದ್ದಾರೆ.
ಜಾಗತಿಕ ನಾಯಕರ ಜೊತೆಗೆ ಮೋದಿ ಸರಣಿ ದ್ವಿಪಕ್ಷೀಯ ಸಭೆ
ಈ ಕಾರ್ಯಕ್ರಮಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಹಲವು ದೇಶದ ನಾಯಕರ ಜೊತೆಗೆ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
* ಬೆಳಗ್ಗೆ 10 ಗಂಟೆಗೆ ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್
* ಬೆಳಗ್ಗೆ 10.30 ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ
* ಬೆಳಗ್ಗೆ 11 ಗಂಟೆಗೆ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
* ಬೆಳಗ್ಗೆ 11.30ಗೆ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್
* ಸಂಜೆ 5.45 ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

7 ವರ್ಷಗಳ ಬಳಿಕ ಭಾರತಕ್ಕೆ ಜಿನ್ಪಿಂಗ್
ಇಂದಿನ ಕಾರ್ಯಕ್ರಮಗಳಲ್ಲಿ ಮೋದಿ – ಕ್ಸಿ ಜಿನ್ಪಿಂಗ್ ಭೇಟಿ ಅತ್ಯಂತ ಕುತೂಹಲ ಮೂಡಿಸಿದೆ. ಗಾಲ್ವಾನ್ ಘರ್ಷನೆ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಸುಮಾರು 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಈ ಮಾತುಕತೆಗೆ ವಿಶೇಷ ಮಹತ್ವ ಬಂದಿದೆ. ಭಾರತ–ಚೀನಾ ಸಂಬಂಧಗಳಲ್ಲಿ ಗಡಿ ವಿಚಾರ, ವ್ಯಾಪಾರ, ಹೂಡಿಕೆ ಹಾಗೂ ದ್ವಿಪಕ್ಷೀಯ ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯಗಳನ್ನ ನಿರ್ವಹಿಸುವುದು ಪ್ರಮುಖ ವಿಚಾರಗಳಾಗುವ ಸಾಧ್ಯತೆಯಿದೆ. ಭಿನ್ನಾಭಿಪ್ರಾಯಗಳನ್ನ ಸೂಕ್ತವಾಗಿ ನಿರ್ವಹಿಸುತ್ತಲೇ ಸಂವಹನ ಮತ್ತು ಸಹಕಾರವನ್ನು ಹೆಚ್ಚಿಸುವ ಅಗತ್ಯ ಚೀನಾ ಒತ್ತಿಹೇಳಿದೆ.

ರಾಷ್ಟ್ರಪತಿ ಮುರ್ಮು ಜೊತೆಗೆ ಇರಾನ್ ಅಧ್ಯಕ್ಷರ ಸಭೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರನ್ನು ರಾಷ್ಟ್ರಪತಿ ಮುರ್ಮು ಭೇಟಿ ಮಾಡುವ ಕಾರ್ಯಕ್ರಮವಿದೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ–ಇರಾನ್ ಸಂಬಂಧಗಳ ದೃಷ್ಟಿಯಿಂದ ಈ ಮಾತುಕತೆಯೂ ಮಹತ್ವ ಪಡೆದಿದೆ.
ಇಂದಿನ ಎಲ್ಲ ಸಭೆಗಳ ಬಳಿಕ ನಾಳೆಯೂ ಸಭೆ ಮುಂದುವರಿಯಲಿದ್ದು ಹಲವು ಸಭೆ ಬಳಿಕ ನವದೆಹಲಿ ನಿರ್ಣಯಕ್ಕೆ ಎಲ್ಲ ದೇಶಗಳು ಸಹಿ ಹಾಕುವ ಮೂಲಕ ಸಭೆಯನ್ನು ಅಂತ್ಯಗೊಳಿಸಲಾಗುತ್ತದೆ.

